ಕಾರವಾರ:ಕಡಲ ನಗರಿ ಕಾರವಾರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು ಐಸಿಯು ಬೆಡ್ಗಳು ಭರ್ತಿಯಾಗಿವೆ. ಇಲ್ಲಿ ಸೋಂಕಿತನೋರ್ವ ಬೆಡ್ ಸಿಗದೆ ಕೆಲ ಹೊತ್ತು ಪರದಾಡುವಂತಾಗಿತ್ತು.
ಐಸಿಯು ಬೆಡ್ಗಳಿಗೆ ಹೆಚ್ಚಿದ ಬೇಡಿಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳ ಸಂಖ್ಯೆ ಕಡಿಮೆಯಿರುವುದರಿಂದ ತೀವ್ರ ಅನಾರೋಗ್ಯಕ್ಕೆ ಒಳಗಾದವರಿಗೆ ಕಾರವಾರದ ಮೆಡಿಕಲ್ ಕಾಲೇಜು ಆಸ್ಪತ್ರೆ ಆಸರೆಯಾಗಿದೆ. ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಐಸಿಯು ಬೆಡ್ಗಳು ಭರ್ತಿಯಾಗಿದ್ದು, ಆಸ್ಪತ್ರೆಯ ಅಧಿಕಾರಿಗಳಿಗಿದು ತಲೆನೋವಾಗಿ ಪರಿಣಮಿಸಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಲ್ಲಿ 2,566 ಪ್ರಕರಣಗಳು ದಾಖಲಾಗಿದೆ. ಭಾನುವಾರ 890 ಪ್ರಕರಣ ದಾಖಲಾದರೆ, ಸೋಮವಾರ 721 ಪ್ರಕರಣಗಳು ದಾಖಲಾಗಿದ್ದವು. ಮಂಗಳವಾರ 955 ಪ್ರಕರಣ ದಾಖಲಾಗಿದ್ದು, ಸೋಂಕಿತರ ಸಂಖ್ಯೆ ತೀವ್ರ ಗತಿಯಲ್ಲಿ ಹೆಚ್ಚಾಗಿರುವುದರಿಂದ ಬೆಡ್ ಸಮಸ್ಯೆ ಎದುರಾಗಿದೆ. ಬೇರೆ ಎಲ್ಲಾ ತಾಲೂಕಿನ ಗಂಭೀರ ಸಮಸ್ಯೆ ಎದುರಿಸುತ್ತಿರುವ ಸೋಂಕಿತರನ್ನು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕಳಿಸುತ್ತಿರುವ ಹಿನ್ನೆಲೆ ಐಸಿಯು ಭರ್ತಿಯಾಗಿದೆ.
ಈ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ವಿಚಾರಿಸಿದರೆ, ನಾವು ಮೆಡಿಕಲ್ ಕಾಲೇಜಿನಲ್ಲಿ ಬೆಡ್ ಹೆಚ್ಚಿಸಲು ಪ್ರಯತ್ನ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಸದ್ಯ ಜಿಲ್ಲಾಡಳಿತ ಐಸಿಯು ಬೆಡ್ ಸಮಸ್ಯೆ ಎದುರಿಸುತ್ತಿದೆ. ಹೀಗಾಗಿ, ಎಲ್ಲಾ ಆಸ್ಪತ್ರೆಗಳಲ್ಲಿ ಹೆಲ್ಪ್ ಡೆಸ್ಕ್ ಪ್ರಾರಂಭಿಸಿ, ಸೋಂಕಿತರನ್ನು ಮೊದಲು ದಾಖಲಿಸಿ ಚಿಕಿತ್ಸೆ ನೀಡಿ ನಂತರ ಐಸಿಯು ಬೆಡ್ಗೆ ಚಿಕಿತ್ಸೆಗಾಗಿ ದಾಖಲಿಸಲು ಮುಂದಾಗಿದೆ.