ಕರ್ನಾಟಕ

karnataka

ETV Bharat / state

ಕಾರವಾರ: ಕೆಲಸ ಸ್ಥಗಿತಗೊಳಿಸಿ ಪವರ್‌ ಕಾರ್ಪೊರೇಷನ್‌ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ - ಕಾರವಾರದಲ್ಲಿ ಗುತ್ತಿಗೆ ಕಾರ್ಮಿಕರಿಂದ ಪ್ರತಿಭಟನೆ

ಸರ್ಕಾರ ನಿಗದಿಪಡಿಸಿದಂತೆ ಕನಿಷ್ಟ ವೇತನ ಹಾಗೂ ಇತರೆ ಸೌಲಭ್ಯಗಳನ್ನ ಒದಗಿಸುವುದಾಗಿ ತಿಳಿಸಲಾಗಿತ್ತಾದರೂ ಯಾವುದನ್ನೂ ಸಹ ಪಾಲಿಸುತ್ತಿಲ್ಲ. ಅಲ್ಲದೇ ಸಮಯಕ್ಕೆ ಸರಿಯಾಗಿ ವೇತನವನ್ನೂ ನೀಡುತ್ತಿಲ್ಲ. ಇದರಿಂದ ಬೇಸತ್ತ ಗುತ್ತಿಗೆ ಕಾರ್ಮಿಕರು ಕಳೆದೆರಡು ದಿನಗಳಿಂದ ಕೆಲಸ ಸ್ಥಗಿತಗೊಳಿಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

Karnataka Power Corporation contract workers protest
ಕರ್ನಾಟಕ ಪವರ್ ಕಾರ್ಪೊರೇಷನ್‌ ಗುತ್ತಿಗೆ ಕಾರ್ಮಿಕರಿಂದ ಪ್ರತಿಭಟನೆ

By

Published : May 22, 2022, 7:32 AM IST

ಕಾರವಾರ:ಕರ್ನಾಟಕ ಪವರ್ ಕಾರ್ಪೊರೇಷನ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಮಿಕರು ಐದಾರು ವರ್ಷಗಳಿಂದ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಈವರೆಗೆ ಸರ್ಕಾರ ನಿಗದಿಪಡಿಸಿದಂತೆ ವೇತನ, ಮೂಲಭೂತ ಸೌಕರ್ಯಗಳನ್ನು ನೀಡದಿರುವುದು ನೌಕರರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಸೌಲಭ್ಯಗಳನ್ನು ನೀಡುವಂತೆ ಆಗ್ರಹಿಸಿ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ.


ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕದ್ರಾ ಗ್ರಾಮದಲ್ಲಿರುವ ಕರ್ನಾಟಕ ವಿದ್ಯುತ್ ನಿಗಮದಲ್ಲಿ ಕಳೆದ ಆರೇಳು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿಕೊಂಡು ಬರುತ್ತಿದ್ದಾರೆ. ತಾಲೂಕಿನ ಕದ್ರಾ, ಕೊಡಸಳ್ಳಿ, ಬೊಮ್ಮನಳ್ಳಿ, ಜೋಯಿಡಾದ ಗಣೇಶಗುಡಿ ಹಾಗೂ ದಾಂಡೇಲಿಯ ಅಂಬಿಕಾನಗರ ವಿದ್ಯುತ್ ನಿಗಮದಲ್ಲಿ ಒಟ್ಟು 150ಕ್ಕೂ ಅಧಿಕ ಮಂದಿ ಗುತ್ತಿಗೆ ನೌಕರರು ಕೆಲಸ ಮಾಡುತ್ತಿದ್ದಾರೆ.

ಕಳೆದ ಜನವರಿಯಲ್ಲಿ ರಾಯಚೂರು ಮೂಲದ 'ಬನಶಂಕರಿ ಎಲೆಕ್ಟ್ರಿಕಲ್ಸ್‌ ಕಂಪನಿ' ಕರ್ನಾಟಕ ವಿದ್ಯುತ್ ನಿಗಮಕ್ಕೆ ಕಾರ್ಮಿಕರನ್ನು ಒದಗಿಸಲು ಮೆಗಾ ಟೆಂಡರ್ ಪಡೆದುಕೊಂಡಿದೆ. ಆರಂಭದಲ್ಲೇ ಸರ್ಕಾರ ನಿಗದಿಪಡಿಸಿದಂತೆ ಕನಿಷ್ಟ ವೇತನ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸುವುದಾಗಿ ತಿಳಿಸಲಾಗಿತ್ತು. ಆದರೆ ಯಾವುದನ್ನೂ ಸಹ ಪಾಲಿಸುತ್ತಿಲ್ಲ. ಅಲ್ಲದೇ ಸಮಯಕ್ಕೆ ಸರಿಯಾಗಿ ವೇತನವನ್ನೂ ನೀಡುತ್ತಿಲ್ಲ. ಇದರಿಂದ ಬೇಸತ್ತ ಗುತ್ತಿಗೆ ಕಾರ್ಮಿಕರು ಕಳೆದೆರಡು ದಿನಗಳಿಂದ ಕೆಲಸ ಸ್ಥಗಿತಗೊಳಿಸಿ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ.

ಕರ್ನಾಟಕ ಪವರ್ ಕಾರ್ಪೊರೇಷನ್‌ನಲ್ಲಿ ಟೆಕ್ನೀಶಿಯನ್, ಎಲೆಕ್ಟ್ರಿಶಿಯನ್, ಡ್ರೈವರ್ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಸ್ಥಳೀಯ ಯುವಕರಿದ್ದಾರೆ. ಕಾರ್ಮಿಕ ಕಾಯ್ದೆಯ ಪ್ರಕಾರ ಗುತ್ತಿಗೆ ನೌಕರರಿಗೆ 696 ರೂ. ವೇತನ ನೀಡಬೇಕು. ಪಿಎಫ್, ಇಎಸ್‌ಐ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಆದರೆ ಕೆಪಿಸಿಯಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ನೌಕರರಿಗೆ ಸದ್ಯ 434 ರೂ ವೇತನ ನೀಡಲಾಗುತ್ತಿದೆ. ಪಿಎಫ್, ಇಎಸ್ಐ ಕಡಿತಗೊಳಿಸಲಾಗುತ್ತಿದೆಯಾದರೂ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ.

ಈ ಹಿಂದೆ ಇದೇ ವಿಚಾರಕ್ಕೆ ಪ್ರತಿಭಟನೆ ನಡೆಸಿದ್ದಾಗ ಮೆಗಾ ಟೆಂಡರ್ ಬಳಿಕ ಸಮಸ್ಯೆ ಪರಿಹಾರವಾಗುವ ಭರವಸೆ ನೀಡಲಾಗಿತ್ತು. ಆದರೆ ಈವರೆಗೆ ಗುತ್ತಿಗೆ ಪಡೆದ ಕಂಪನಿ ಕಾರ್ಮಿಕರ ಬೇಡಿಕೆಗಳಿಗೆ ಕಿವಿಗೊಡುತ್ತಿಲ್ಲ. ಇನ್ನು ಬಹುತೇಕರಿಗೆ ಇದೇ ಉದ್ಯೋಗವೇ ಮನೆಯ ನಿರ್ವಹಣೆಗೆ ಮೂಲ ಆಧಾರವಾಗಿದ್ದು ವೇತನ ಸಮಸ್ಯೆಯಿಂದಾಗಿ ಸಂಕಷ್ಟ ಎದುರಿಸುವಂತಾಗಿದೆ. ಹೀಗಾಗಿ ಜಿಲ್ಲೆಯವರೇ ಆಗಿರುವ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಗುತ್ತಿಗೆ ಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದು ಗುತ್ತಿಗೆ ಕಾರ್ಮಿಕರು ಒತ್ತಾಯಿಸಿದ್ದಾರೆ.

ABOUT THE AUTHOR

...view details