ಕಾರವಾರ: ಅದು ನದಿಯಂಚಿನ ಪುಟ್ಟ ಗ್ರಾಮ. ಮಳೆಗಾಲದಲ್ಲಿ ಹೊರ ಊರಿನ ಸಂಪರ್ಕ ಕಳೆದುಕೊಳ್ಳುವ ಈ ಗ್ರಾಮಸ್ಥರ ಯಾತನೆ ಯಾರಿಗೂ ಬೇಡವೇ ಬೇಡ. ತುಂಬಿ ಹರಿಯುವ ಹಳ್ಳದಲ್ಲಿ ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಜೀವ ಕೈಯಲ್ಲಿ ಹಿಡಿದು ಸಾಗಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರ ಇದ್ದೂ ಇಲ್ಲದಂತಾಗಿದೆ.
ಹೌದು, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಏಳು ದಶಕಗಳು ಕಳೆದರೂ ಕೂಡ ಕೆಲ ಹಳ್ಳಿಗಳು ಕನಿಷ್ಠ ಮೂಲ ಸೌಕರ್ಯವಿಲ್ಲದೇ ಪರದಾಡುತ್ತಿವೆ. ಇದಕ್ಕೆ ನೈಜ ಉದಾಹರಣೆ ಅಂದ್ರೆ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮ.
ಮೂಲ ಸೌಕರ್ಯಗಳಿಂದ ವಂಚಿತರಾದ ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮಸ್ಥರು ಹೊಸಾಕುಳಿ ಗ್ರಾಮಸ್ಥರು ಸೇತುವೆ ಇಲ್ಲದೇ ಸಂಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಗ್ರಾಮದಲ್ಲಿರುವ ಹಳ್ಳ ತುಂಬಿ ಹರಿಯುವ ಕಾರಣ ಗ್ರಾಮಸ್ಥರಿಗೆ ಪ್ರತಿ ಮಳೆಗಾಲದಲ್ಲಿ ಹೊರ ಊರಿನ ಸಂಪರ್ಕ ಕಡಿತಗೊಳ್ಳುತ್ತದೆ. ಸಣ್ಣ ಮಳೆ ಬಂದರೂ ತುಂಬಿ ಹರಿಯುವ ಹಳ್ಳಕ್ಕೆ ಯಾವುದೇ ಸೇತುವೆ ಇಲ್ಲ. ಪರಿಣಾಮ ಗ್ರಾಮಸ್ಥರು ಹಳ್ಳದ ನೀರಿನಲ್ಲೇ ಸರ್ಕಸ್ ಮಾಡಿ ದಾಟಬೇಕಾದ ಅನಿವಾರ್ಯತೆ ಎದುರಾಗಿದೆ.
ಇದನ್ನೂ ಓದಿ:AP Floods: ಪ್ರವಾಹಕ್ಕೆ ಆಂಧ್ರ ತತ್ತರ: ಇಲ್ಲಿಯವರೆಗೆ 17 ಮಂದಿ ಸಾವು
’ದಯವಿಟ್ಟು ಗ್ರಾಮಕ್ಕೊಂದು ಸೇತುವೆ ಮಾಡಿಸಿಕೊಡಿ’
ಹೊನ್ನಾವರ ಪಟ್ಟಣದಿಂದ ಕೇವಲ 8 ಕಿಲೋ ಮೀಟರ್ ದೂರದಲ್ಲಿ ಈ ಹೊಸಾಕುಳಿ ಗ್ರಾಮವಿದೆ. ದಶಕಗಳಿಂದ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಸೇತುವೆ ನಿರ್ಮಿಸಿಕೊಡುವಂತೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಮಸ್ಯೆಯಿಂದ ಮನನೊಂದ ಪುಟ್ಟ ಬಾಲಕಿಯೊಬ್ಬಳು ತಮ್ಮ ಗ್ರಾಮಕ್ಕೆ ಸೇತುವೆ ನಿರ್ಮಿಸಿಕೊಡುವಂತೆ ಕೈ ಮುಗಿದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್‌ಗೆ ಮನವಿ ಮಾಡಿಕೊಂಡಿರುವ ಈ ದೃಶ್ಯ ಮನಕಲಕುವಂತಿದೆ.
ಇದನ್ನೂ ಓದಿ:ಮಹಿಮೆ ಗ್ರಾಮಸ್ಥರಿಗೆ ಕಂಟಕವಾದ ಹಳ್ಳ: ಶಾಲೆಯಿಂದ ದೂರವಾಗುತ್ತಿರುವ ಮಕ್ಕಳು
'ಕಳೆದ ಮೂರು ವರ್ಷಗಳಿಂದ ಈ ಪ್ರದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚಳವಾಗಿದೆ. ಹೀಗಾಗಿ, ವರ್ಷವಿಡಿ ತುಂಬಿ ಹರಿಯುವ ಹಳ್ಳದ ನೀರಿನಲ್ಲೇ ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಪ್ರತಿನಿತ್ಯ ಶಾಲೆಗಳಿಗೆ ತೆರಳುವ ವಿದ್ಯಾರ್ಥಿಗಳು, ಕೆಲಸಕ್ಕೆ ತೆರಳುವ ಗ್ರಾಮಸ್ಥರು ಈ ನದಿಯಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಸಾಗಬೇಕು. ಗ್ರಾಮದಲ್ಲಿ ಸುಮಾರು 50 ಕುಟುಂಬಗಳು ವಾಸವಿದ್ದು, ರೋಗಿಗಳು, ಗರ್ಭಿಣಿಯರನ್ನು ಆಸ್ಪತ್ರೆಗೆ ಸಾಗಿಸಲು ತುಂಬಾ ಕಷ್ಟವಾಗುತ್ತಿದೆ. ಗ್ರಾಮಕ್ಕೆ ಸೂಕ್ತ ರಸ್ತೆ ವ್ಯವಸ್ಥೆ ಹಾಗೂ ಸೇತುವೆ ನಿರ್ಮಿಸಿ ಕೊಡಬೇಕೆಂದು' ಇಲ್ಲಿನ ಸ್ಥಳೀಯರಾದ ಚಿದಂಬರ ನಾಯ್ಕ ಒತ್ತಾಯಿಸಿದ್ದಾರೆ.