ಕಾರವಾರ:ಮಳೆಗೆ ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಗುಡ್ಡ ಕುಸಿದು ಸಾಕಷ್ಟು ಅನಾಹುತ ಸೃಷ್ಟಿಯಾಗಿದೆ. ಅದರಲ್ಲಿಯೂ ಗುಡ್ಡಗಳನ್ನು ಕೃತಕವಾಗಿ ಕೊರೆದ ಪ್ರದೇಶಗಳಲ್ಲಿಯೇ ಇಂತಹ ಅನಾಹುತಗಳು ಸಂಭವಿಸುತ್ತಿದ್ದು, ಅಮಾಯಕ ಜೀವಗಳು ಬಲಿಯಾಗುವಂತಾಗಿದೆ. ಆದರೆ ಇದೀಗ ಜಿಲ್ಲಾಧಿಕಾರಿ ಕಚೇರಿ ಸಮೀಪವೇ ಬೃಹತ್ ಗುಡ್ಡವನ್ನು ಕೊರೆದು ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಗುಡ್ಡ ಕುಸಿಯುವ ಭೀತಿ ಎದುರಾಗಿದೆ. ಗುಡ್ಡದ ಬುಡದಲ್ಲಿ ವಾಸವಾಗಿರುವ ನೂರಾರು ಕುಟುಂಬಗಳಲ್ಲಿ ಆತಂಕ ಮನೆಮಾಡಿದೆ.
ನೌಕಾನೆಲೆಯಿಂದ ರಸ್ತೆ ಕಾಮಗಾರಿ: ಜಿಲ್ಲಾ ಕೇಂದ್ರ ಕಾರವಾರದ ಬೈತಖೋಲದಲ್ಲಿನ ನೌಕಾನೆಲೆಯಿಂದ ರಸ್ತೆ ಕಾಮಗಾರಿ ಮಾಡಲಾಗುತ್ತಿದೆ. ಇದು ಈ ಭಾಗದ ಜನರಲ್ಲಿ ಗುಡ್ಡ ಕುಸಿತದ ಭೀತಿ ಎದುರಿಸುವಂತೆ ಮಾಡಿದೆ. ನೌಕಾನೆಲೆ ವ್ಯಾಪ್ತಿಗೆ ಒಳಪಡುವ ಬೈತಖೋಲದ ಗುಡ್ಡದಲ್ಲಿ ಕಳೆದ ಕೆಲ ದಿನಗಳಿಂದ ಜೆಸಿಬಿಗಳನ್ನು ಉಪಯೋಗಿಸಿ ಗುಡ್ಡ ಕೊರೆದು ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ.
ಈ ಕಾಮಗಾರಿ ನಡೆಯುತ್ತಿರುವ ಗುಡ್ಡದ ಕೆಳ ಭಾಗದಲ್ಲಿ ನೂರಾರು ಮೀನುಗಾರರ ಮನೆಗಳಿವೆ. ಗುಡ್ಡದಲ್ಲಿ ಬೃಹತ್ ಪ್ರಮಾಣದ ಮಣ್ಣನ್ನು ತೆರವು ಮಾಡಿ ರಸ್ತೆ ನಿರ್ಮಾಣ ಮಾಡುತ್ತಿರುವ ಕಾರಣ, ಭಾರಿ ಮಳೆಯಲ್ಲಿ ಗುಡ್ಡ ಕುಸಿಯುವ ಭೀತಿ ಇಲ್ಲಿನ ಸ್ಥಳೀಯ ನಿವಾಸಿಗಳನ್ನು ಕಾಡತೊಡಗಿದೆ.
ಮೀನುಗಾರರ ಕುಟುಂಬಗಳಿಗೆ ಕಂಟಕ: ಈ ಹಿಂದೆ ಗುಡ್ಡದ ಬುಡದಲ್ಲಿ ರಸ್ತೆ ಕಾಮಗಾರಿಗೆ ಮುಂದಾದಾಗ ವಿರೋಧ ಮಾಡಿ ಜೆಸಿಬಿಗಳನ್ನು ವಾಪಸ್ ಕಳುಹಿಸಲಾಗಿತ್ತು. ಆದರೆ ಇದೀಗ ನೌಕಾನೆಲೆಯವರು ತಮ್ಮ ವ್ಯಾಪ್ತಿಗೊಳಪಡುವ ಗುಡ್ಡ ಪ್ರದೇಶದಲ್ಲಿ ಮಣ್ಣನ್ನು ತೆರವು ಮಾಡಿ ರಸ್ತೆ ಮಾಡುತ್ತಿದ್ದಾರೆ. ಹೀಗೆ ರಸ್ತೆ ಮಾಡಿ ಒಮ್ಮೆ ಕುಸಿತವಾದಲ್ಲಿ ಗುಡ್ಡದ ಬುಡದಲ್ಲಿಯೇ ವಾಸವಾಗುವ ನೂರಾರು ಮೀನುಗಾರರ ಕುಟುಂಬಗಳಿಗೆ ಕಂಟಕವಾಗಲಿದೆ.