ಹುಬ್ಬಳ್ಳಿ - ಅಂಕೋಲಾ ರೈಲ್ವೆ ಯೋಜನೆ ಕಾರವಾರ : ಅದು ಬಹು ವರ್ಷಗಳಿಂದ ನನೆಗುದಿಗೆ ಬಿದ್ದ ಯೋಜನೆ. ಇನ್ನೇನು ಅನುಮತಿ ದೊರೆಯಿತು ಎನ್ನುವಾಗಲೇ ಅಡೆತಡೆ ಎದುರಾಗುತ್ತಾ ಅನುಷ್ಠಾನಗೊಳ್ಳದೆ ದಶಕಗಳಿಂದ ವಿಳಂಬವಾಗುತ್ತಿತ್ತು. ಆದರೆ, ಇದೀಗ ಹೈಕೋರ್ಟ್ ಯೋಜನೆಯ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಿಲೇವಾರಿ ಮಾಡಿದ್ದಲ್ಲದೆ ಅನುಷ್ಠಾನಕ್ಕೂ ಹಸಿರು ನಿಶಾನೆ ತೋರಿದೆ.
ಅಂಕೋಲಾ-ಹುಬ್ಬಳ್ಳಿ ರೈಲ್ವೆ ಯೋಜನೆಗಾಗಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಕಾಲದಿಂದಲೂ ಪ್ರಯತ್ನ ನಡೆಸಲಾಗುತ್ತಿದೆ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಶಂಕುಸ್ಥಾಪನೆ ಮಾಡಲಾದ ಈ ರೈಲ್ವೆ ಮಾರ್ಗಕ್ಕೆ ಹುಬ್ಬಳ್ಳಿಯ ಕಲಘಟಗಿಯವರೆಗೆ ಹಳಿ ಕೂಡ ನಿರ್ಮಿಸಲಾಗಿದೆ. ಬಳಿಕ ಪರಿಸರವಾದಿಗಳು ಒಂದಲ್ಲೊಂದು ರೀತಿಯಲ್ಲಿ ಅಡ್ಡಗಾಲು ಹಾಕುತ್ತಿದ್ದರು. ಮೊದಲಿಗೆ ಉತ್ತರ ಕನ್ನಡ ಜಿಲ್ಲೆಯ ಪಾಂಡುರಂಗ ಹೆಗಡೆಯವರು ಈ ಯೋಜನೆ ವಿರುದ್ಧ ಪರಿಸರ ಕಾರಣವೊಡ್ಡಿ 2001ರಲ್ಲಿ ಪಿಐಎಲ್ ಸಲ್ಲಿಸಿದ್ದರು. ಇದರಿಂದಾಗಿ 19 ವರ್ಷಗಳ ಕಾಲ ಯೋಜನೆ ಸ್ಥಗಿತಗೊಂಡಿತ್ತು. 2020ರಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭ ರಾಜ್ಯ ವನ್ಯಜೀವಿ ಮಂಡಳಿಯಿಂದ ಯೋಜನೆಗೆ ಕ್ಲಿಯರೆನ್ಸ್ ಸಿಗುತ್ತಿದ್ದಂತೆ ಬೆಂಗಳೂರಿನ ವೃಕ್ಷ ಫೌಂಡೇಶನ್ ಈ ಆದೇಶದ ವಿರುದ್ಧ ಕೋರ್ಟ್ ಹೋಗಿ, ತಡೆಯಾಜ್ಞೆ ತಂದಿದ್ದರಿಂದ ಯೋಜನೆ ಮತ್ತಷ್ಟು ದೂರವಾಗಿತ್ತು.
ಆದರೆ, 2021ರಲ್ಲಿ ಉತ್ತರ ಕನ್ನಡ ರೈಲ್ವೆ ಸೇವಾ ಸಮಿತಿಯ ಮೂಲಕ ತಡೆಯಾಜ್ಞೆ ತೆರವುಗೊಳಿಸಲು ವಕೀಲರಾದ ಆರ್.ಜಿ.ಕೊಲ್ಲೆ, ಅಕ್ಷಯ್ ಕೊಲ್ಲೆ ವಾದ ಮಂಡಿಸಿದಾಗ ಹೈಕೋರ್ಟ್ ವನ್ಯಜೀವಿ ಮಂಡಳಿಯಿಂದ ವರದಿ ನೀಡಲು ಸೂಚಿಸಿತ್ತು. ಅದರಂತೆ ವನ್ಯಜೀವಿ ಮಂಡಳಿ ಅಧ್ಯಯನ ನಡೆಸಿ ರೈಲ್ವೆ ಯೋಜನೆಯ ಪರವಾಗಿ ವರದಿ ನೀಡಿದ್ದು, ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಉತ್ತಮ ಆದೇಶ ನೀಡುವ ಮೂಲಕ ಇಷ್ಟು ವರ್ಷಗಳ ಕಾನೂನು ಪ್ರಕ್ರಿಯೆಗೆ ಇತಿಶ್ರೀ ಹಾಡಿದ್ದಾರೆ. ಅಲ್ಲದೇ, ರೈಲ್ವೆ ಮಂಡಳಿ ಕೂಡ ವನ್ಯಜೀವಿ ಮಂಡಳಿಯ ನಿರ್ದೇಶನದಂತೆ ಮಾಡುವುದಾಗಿ ಅಫಿಡವಿಟ್ ನೀಡಿರುವುದರಿಂದ ಅಂಕೋಲಾ-ಹುಬ್ಬಳ್ಳಿ ರೈಲ್ವೆ ಯೋಜನೆಗಿದ್ದ ಎಲ್ಲಾ ತೊಡಕು ನಿವಾರಣೆಯಾದಂತಾಗಿದೆ ಎಂದು ರೈಲ್ವೆ ಸೇವಾ ಸಮಿತಿ ಕಾರ್ಯಾಧ್ಯಕ್ಷ ರಾಜೀವ್ ಗಾಂವಕರ್ ಸಂತಸ ವ್ಯಕ್ತಪಡಿಸಿದರು.
ರೈಲ್ವೆ ಯೋಜನೆಯ ಸಾಕಾರಕ್ಕೆ ಕೆಲವು ನಕಲಿ ಪರಿಸರವಾದಿಗಳು ಅಡ್ಡಗಾಲು ಹಾಕಿ ನ್ಯಾಯಾಲಯ ಹಾಗೂ ಸಾರ್ವಜನಿಕರ ದಿಕ್ಕು ತಪ್ಪಿಸಿದ್ದರು. ಕಾಳಿ ಹುಲಿ ಸಂರಕ್ಷಿತಾರಣ್ಯ ಹಾಗೂ ಪರಿಸರ ಸೂಕ್ಷ್ಮ ವಲಯದಲ್ಲಿ ರೈಲು ಹಳಿ ಹಾದು ಹೋಗಲಿದೆ ಎಂದು ವಾದಿಸಿದ್ದರು. ಆದರೆ, ಅರಣ್ಯ ಇಲಾಖೆ ದಾಖಲಾತಿ ಹಾಗೂ ನಮ್ಮ ರೈಲ್ವೆ ಸೇವಾ ಸಮಿತಿ ಕಾರ್ಯಾಧ್ಯಕ್ಷ ರಾಜೀವ್ ಗಾಂವಕರ್ ಸಲ್ಲಿಕೆ ಮಾಡಿದ್ದ ನಕ್ಷೆಯಿಂದ ಆರೋಪಗಳು ಸತ್ಯಕ್ಕೆ ದೂರವಿರುವುದು ಸಾಬೀತಾಗಿದ್ದು, ನ್ಯಾಯಾಲಯ ಯೋಜನೆ ವಿರುದ್ಧದ ಅರ್ಜಿ ವಿಲೇವಾರಿ ಮಾಡಿದೆ. ಎಲ್ಲಾ ಅಂದುಕೊಂಡಂತಾದರೆ ಯೋಜನೆಯಿಂದ ಉತ್ತರ ಕನ್ನಡ ಜಿಲ್ಲೆಯ ಕೃಷಿ, ಕೈಗಾರಿಕೆ, ವ್ಯಾಪಾರ, ಪ್ರವಾಸೋದ್ಯಮ, ಶಿಕ್ಷಣ ಎಲ್ಲಾ ಕ್ಷೇತ್ರದಲ್ಲೂ ಅಭಿವೃದ್ಧಿಯಾಗಲಿದೆ. ಜನರು ಕೂಡ ಯೋಜನೆ ಅನುಷ್ಠಾನಕ್ಕೆ ಸಹಕಾರ ನೀಡಬೇಕು ಎಂದು ಅವರು ಆಗ್ರಹಿಸಿದರು.
ಇದನ್ನೂ ಓದಿ :Balasore train tragedy: ಒಡಿಶಾ ತ್ರಿವಳಿ ರೈಲು ದುರಂತ.. ರೈಲ್ವೆ ಇಲಾಖೆಯ ಮೂವರು ಅಧಿಕಾರಿಗಳ ವಿರುದ್ಧ ಸಿಬಿಐ ಚಾರ್ಜ್ ಶೀಟ್