ಶಿರಸಿ :ಹಿಂದಿನ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಬೀಳಿಸಲು ನಮ್ಮ ಜೊತೆ ಕೈಜೋಡಿಸಿ ಎಂದು ಹಾಲಿ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರು ಕೇಳಿಕೊಂಡಿದ್ದರು ಎಂದು ಸಹಕಾರಿ ಸಚಿವ ಎಸ್ ಟಿ ಸೋಮಶೇಖರ್ ಸಾರ್ವಜನಿಕ ವೇದಿಕೆಯಲ್ಲೇ ಗುಟ್ಟನ್ನು ಬಿಚ್ಚಿಟ್ಟರು.
ಮೈತ್ರಿ ಸರ್ಕಾರ ಕೆಡವಿದ್ದರ ಕುರಿತ ಗುಟ್ಟನ್ನ ಬಿಚ್ಚಿಟ್ಟ ಸಹಕಾರಿ ಸಚಿವ ಎಸ್ ಟಿ ಸೋಮಶೇಖರ್.. ನಗರದ ಕೆಡಿಸಿಸಿ ಬ್ಯಾಂಕ್ ಆಯೋಜಿಸಿದ್ದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಸಚಿವರು ಭಾಗವಹಿಸಿದ್ದರು. ಈ ವೇಳೆ ಮಾತನಾಡುತ್ತಾ, ಹಿಂದಿನ ಸರ್ಕಾರ ಬೀಳಿಸುವಲ್ಲಿ ನಡೆದ ಹಾಗೂ ನಂತರ ಬೆಳವಣಿಗೆ ಕುರಿತ ಸ್ವಾರಸ್ಯಕರ ಸಂಗತಿ ಬಿಚ್ಚಿಟ್ಟರು.
ಆಗ ನಾನು ಬಿಡಿಎ ಅಧ್ಯಕ್ಷರಾಗಿದ್ದೆ. ಬಸವರಾಜು ಅವರೊಟ್ಟಿಗೆ ಕುಳಿತು ಊಟ ಮಾಡುತ್ತಿದ್ದಾಗ ಕಾಂಗ್ರೆಸ್ ಶಾಸಕರಾಗಿದ್ದ ಹೆಬ್ಬಾರ್ ತೀರಾ ಸಿಟ್ಟಿನಿಂದ ಬಂದರು. ವಿಷಯ ಪ್ರಸ್ತಾಪಿಸಿದಾಗ ಸಚಿವ ಸ್ಥಾನ ನೀಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಸರ್ಕಾರ ಬೀಳಿಸುವ ಕುರಿತು ಮಾತನಾಡಿದರು ಎಂದು ಬಿಜೆಪಿಗೆ ವಲಸೆ ಬಂದ ಸಂದರ್ಭದ ಚಿತ್ರಣವನ್ನು ತೆರೆದಿಟ್ಟರು.
ನಮ್ಮ ಎಲ್ಲಾ ಕೆಲಸಗಳಿಗೆ ಹೆಬ್ಬಾರ್ ಅವರು ಮಾರ್ಗದರ್ಶಕರು ಎನ್ನುವ ಮೂಲಕ ಸರ್ಕಾರ ಕೆಡುವುದರಲ್ಲಿ ಹೆಬ್ಬಾರ್ ಅವರದ್ದು ಮಹತ್ವದ ಪಾತ್ರ ಎಂದು ಸೂಚ್ಯವಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಸಚಿವ ಶಿವರಾಮ್ ಹೆಬ್ಬಾರ್, ಬೈರತಿ ಬಸವರಾಜ್, ಬಿ ಸಿ ಪಾಟೀಲ್, ವಿಧಾನಸಭಾಧ್ಯಕ್ಷ ಕಾಗೇರಿ ಹಾಗೂ ಪರಿಷತ್ ಸಭಾಪತಿ ಹೊರಟ್ಟಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಓದಿ: ನವೆಂಬರ್ ಅಂತ್ಯಕ್ಕೆ ಎಲ್ಲರಿಗೂ ಲಸಿಕೆ, ನಿಫಾ ವೈರಸ್ ಹರಡದಂತೆ ಕ್ರಮ : ಸಚಿವ ಡಾ. ಕೆ ಸುಧಾಕರ್