ಕಾರವಾರ (ಉ.ಕ): ಉತ್ತರ ಕನ್ನಡ ಜಿಲ್ಲೆಯ ಕಾಡುಗಳಲ್ಲಿ ಇಂದಿಗೂ ಹಲವಾರು ಬುಡಕಟ್ಟು ಸಮುದಾಯಗಳು ಜೀವನ ಕಟ್ಟಿಕೊಂಡಿವೆ. ಅದರಲ್ಲೂ ಜಿಲ್ಲೆಯ ಕರಾವಳಿಯಲ್ಲಿ ಕಂಡುಬರುವ ಬುಡಕಟ್ಟು ಸಮುದಾಯದ ಹಾಲಕ್ಕಿ ಒಕ್ಕಲಿಗರು ಕಳೆದ ಹಲವು ವರ್ಷಗಳಿಂದ ತಮ್ಮನ್ನ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಹೋರಾಟ ಮಾಡುತ್ತಿದ್ದಾರೆ. ಅಷ್ಟಾದರೂ ಸರ್ಕಾರ ನಿರ್ಲಕ್ಷ್ಯ ತೋರುತ್ತಿರುವ ಹಿನ್ನೆಲೆ ಜಾನಪದ ಕೋಗಿಲೆ ಖ್ಯಾತಿಯ ಸುಕ್ರಿ ಬೊಮ್ಮುಗೌಡ ಇದೀಗ ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನೇ ಪಣಕ್ಕಿಟ್ಟು ಹೋರಾಟಕ್ಕಿಳಿದಿದ್ದಾರೆ.
ಹಾಲಕ್ಕಿ ಒಕ್ಕಲಿಗರು ಉತ್ತರಕನ್ನಡ ಜಿಲ್ಲೆಯಲ್ಲಿ ಕಂಡು ಬರುವ ವಿಶಿಷ್ಟ ಬುಡಕಟ್ಟು ಜನಾಂಗ. ಜಿಲ್ಲೆಯ ಕರಾವಳಿ ತಾಲೂಕುಗಳಾದ ಅಂಕೋಲಾ, ಕಾರವಾರ, ಕುಮಟಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ಮಾತ್ರ ಹಾಲಕ್ಕಿ ಬುಡಕಟ್ಟು ಜನಾಂಗದವರು ಕಂಡು ಬರುತ್ತಾರೆ. ಈ ಸಮುದಾಯ ಸರ್ಕಾರದ ನಿರ್ಲಕ್ಷ್ಯಕ್ಕೆ ತುತ್ತಾಗಿದ್ದು, ಹೋರಾಟದ ಹಾದಿಗಿಳಿದಿವೆ.
ಈ ಸಮುದಾಯಕ್ಕೆ ಸೇರಿದ ಜಾನಪದ ಕೋಗಿಲೆ ಖ್ಯಾತಿಯ ನಾಡೋಜ, ಪದ್ಮಶ್ರೀ ಸುಕ್ರಿ ಬೊಮ್ಮುಗೌಡ ಇದೀಗ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಸುಮಾರು 1.5 ಲಕ್ಷ ಜನಸಂಖ್ಯೆ ಇರುವ ಹಾಲಕ್ಕಿ ಒಕ್ಕಲಿಗ ಜನಾಂಗವನ್ನ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆನ್ನುವುದು ಜನಾಂಗದವರ ಬಹುದೊಡ್ಡ ಬೇಡಿಕೆ. ಈ ನಿಟ್ಟಿನಲ್ಲಿ ಕಳೆದ 2000ನೇ ಇಸ್ವಿಯಿಂದಲೂ ಹೋರಾಟ ನಡೆಸುತ್ತಲೇ ಬಂದಿದ್ದು ಇಂದಿಗೂ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಮಾತ್ರ ಸೇರಿಸಿಲ್ಲ.