ಕಾರವಾರ: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ದಶಕಗಳ ಹೋರಾಟಕ್ಕೆ ಕೊನೆಗೂ ಮಣಿದಿರುವ ಸರ್ಕಾರ ಆಸ್ಪತ್ರೆ ನಿರ್ಮಾಣದ ಭರವಸೆ ನೀಡಿದೆ. ಇದು ಜಿಲ್ಲೆಯ ಜನರ ಹಾಗೂ ಹೋರಾಟಗಾರರ ಸಂತೋಷಕ್ಕೂ ಕಾರಣವಾಗಿದೆ. ಆದರೆ ಕೇವಲ ಬಾಯಿ ಮಾತಿಗೆ ಸೀಮಿತವಾಗಿರುವ ಆಸ್ಪತ್ರೆ ನಿರ್ಮಾಣಕ್ಕೆ ಈವರೆಗೂ ಹಣ ಮಂಜೂರಿ ಮಾಡಿಲ್ಲ. ಅಲ್ಲದೆ, ಅಧಿಕೃತವಾಗಿ ಮಂಜೂರಾತಿ ಕೂಡ ದೊರೆಯದೆ ಇರುವುದು ಇದೀಗ ಚುನಾವಣೆ ಭರವಸೆಯಾಗುವ ಆತಂಕ ಶುರುವಾಗಿದ್ದು, ಈ ಕುರಿತ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.
ಉತ್ತರಕನ್ನಡ ಜಿಲ್ಲೆಯಲ್ಲಿ ದಶಕಗಳಿಂದ ಕೇಳಿಬರುತ್ತಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೂಗಿಗೆ ಕೊನೆಗೂ ಸರ್ಕಾರ ಮಣಿದಿದೆ. ಚುನಾವಣೆ ಬೆನ್ನಲ್ಲೇ ಜಿಲ್ಲೆಯಲ್ಲಿ ಶುರುವಾಗಿದ್ದ ದೊಡ್ಡ ಮಟ್ಟದ ಹೋರಾಟಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಸದನದಲ್ಲಿ ಧ್ವನಿಗೂಡಿಸಿದ್ದರು. ಅಲ್ಲದೆ ಆಸ್ಪತ್ರೆ ಕುರಿತು ಚರ್ಚೆಗೆ ಅವಕಾಶ ನೀಡದೆ ಇದ್ದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವ ಬಗ್ಗೆಯೂ ಸ್ವತಃ ಸ್ಪೀಕರ್ ಸೇರಿದಂತೆ ಶಾಸಕರು ಸದನದಲ್ಲಿ ಪ್ರಸ್ತಾಪಿಸಿ ಬೇಡಿಕೆ ಇಟ್ಟಿದ್ದರು.
ಅದರಂತೆ ಆರೋಗ್ಯ ಸಚಿವ ಸುಧಾಕರ್ ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಅಲ್ಲದೆ ಅಧಿವೇಶನ ಮುಗಿದ ಬಳಿಕ ಜಿಲ್ಲೆಗೆ ಬಂದು ಜಾಗದ ಪರಿಶೀಲನೆ ನಡೆಸುವುದಾಗಿ ತಿಳಿಸಿರುವ ಅವರು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ಮಾತುಗಳನ್ನಾಡಿದ್ದಾರೆ. ಇದು ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಹೋರಾಟ ಮಾಡುತ್ತಿದ್ದವರ ಸಂತೋಷಕ್ಕೂ ಕಾರಣವಾಗಿದೆ. ಆದರೆ, ಇನ್ನೇನು ಕೆಲ ತಿಂಗಳುಗಳಲ್ಲಿ ಚುನಾವಣೆ ನಡೆಯಲಿದ್ದು, ಸದ್ಯದಲ್ಲಿಯೇ ಅಧಿಕೃತ ಘೋಷಣೆ ಕೂಡ ಆಗಲಿದೆ.
ಹೀಗೆ ಘೋಷಣೆಯಾದ ಬಳಿಕ ಸರ್ಕಾರ ಯಾವುದೇ ಯೋಜನೆಯನ್ನಾಗಲಿ, ಹಣವನ್ನಾಗಲಿ ಬಿಡುಗಡೆ ಮಾಡಲು ಸಾಧ್ಯವಿಲ್ಲ. ಆದರೆ ಸದ್ಯ ಆಸ್ಪತ್ರೆ ಘೋಷಣೆ ಕೇವಲ ಬಾಯಿ ಮಾತಿನ ಭರವಸೆಯಾಗಿದೆಯೇ ವಿನಃ ಈವರೆಗೂ ಅಧಿಕೃತವಾಗಿಲ್ಲ. ಅಲ್ಲದೆ ಆಸ್ಪತ್ರೆ ನಿರ್ಮಾಣಕ್ಕೆ ತಗಲುವ ಹಣ ಕೂಡ ಮಂಜೂರಿಯಾಗಿಲ್ಲ. ಒಂದೊಮ್ಮೆ ಚುನಾವಣೆ ಘೋಷಣೆಯಾದಲ್ಲಿ ಚುನಾವಣೆ ಭರವಸೆಯಾಗಿ ಉಳಿಯುವುದರಿಂದ ಕೂಡಲೇ ಸುಧಾಕರ್ ಅವರು ಜಿಲ್ಲೆಗೆ ಆಗಮಿಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ತಗಲುವ ಹಣ ಮಂಜೂರಿ ಮಾಡುವ ಜೊತೆಗೆ ಆಸ್ಪತ್ರೆಯ ಶಂಕು ಸ್ಥಾಪನೆ ಕೂಡ ನೆರವೇರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.