ಭಟ್ಕಳ (ಉತ್ತರಕನ್ನಡ): ಕೊರೊನಾ ಸಂಕಷ್ಟದಿಂದಾಗಿ ದುಬೈ ಮತ್ತು ಯುಎಇಗಳಲ್ಲಿ ಸಿಲುಕಿರುವ ಭಟ್ಕಳ ಮತ್ತು ಆಸುಪಾಸಿನ ನಿವಾಸಿಗಳಿಗೊಂದು ಶುಭ ಸುದ್ದಿಯೊಂದು ಹೊರಬಿದ್ದಿದೆ. ಭಟ್ಕಳದ ಖ್ಯಾತ ಉದ್ಯಮಿ ನೂಹಾ ಜನರಲ್ ಟ್ರೇಡಿಂಗ್ ಕಂಪನಿಯ ಮಾಲೀಕ ಅತಿಕುರ್ರಹ್ಮಾನ್ ಮುನೀರಿ ಜನರ ಸಂಕಷ್ಟಕ್ಕೆ ಸ್ಪಂದಿಸಿ ದುಬೈಯಲ್ಲಿ ಸಿಲುಕಿಕೊಂಡಿರುವವರನ್ನು ವಾಪಸ್ ಕರೆತರುವ ವ್ಯವಸ್ಥೆ ಮಾಡಿರುವುದಾಗಿ ತಿಳಿದು ಬಂದಿದೆ.
ದುಬೈಯಿಂದ ಭಟ್ಕಳಕ್ಕೆ ಬರುವವರು ಮೊದಲ 7 ದಿನ ಹೊಟೇಲ್ ಅಥವಾ ಅಂಜುಮನ್ ಕ್ವಾರಂಟೈನ್ ಕೇಂದ್ರದಲ್ಲಿ ಇರಬೇಕಾಗುತ್ತದೆ. ನಂತರದ ಏಳು ದಿನ ಹೋಮ್ ಕ್ವಾರಂಟೈನ್‍ನಲ್ಲಿ ಇರಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ತಿಳಿಸಿದ್ದಾರೆ.
ಈ ಕುರಿತಂತೆ ಮುನೀರಿ ಈಟಿವಿ ಭಾರತ್ ಜೊತೆ ಮಾತನಾಡಿ, ದುಬೈ ಮತ್ತು ಯುಎಇಯ ವಿವಿಧ ನಗರಗಳಲ್ಲಿ ಭಟ್ಕಳದ ನೂರಾರು ಮಂದಿಗೆ ಬಹಳ ತೊಂದರೆಯಲ್ಲಿದ್ದು, ತಮ್ಮ ತಾಯ್ನಾಡಿಗೆ ಮರಳಲು ಬಯಸುತ್ತಿದ್ದಾರೆ. ಆದರೆ, ಸರ್ಕಾರದ ವತಿಯಿಂದ ವಿಮಾನಯಾನ ಸೇವೆ ಇರುವುದಿಲ್ಲ. ಖಾಸಗಿಯವರು ಸಂಪರ್ಕಿಸಿದರೆ ಸಹಾಯ ಮಾಡುವುದಾಗಿ ರಾಯಭಾರ ಕಚೇರಿ ಹೇಳಿದೆ. ಖಾಸಗಿ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಿ ಜೂನ್ 11ಕ್ಕೆ ವಿಮಾನವು ಮಂಗಳೂರಿಗೆ ಪ್ರಯಾಣ ಬೆಳೆಸುವ ವ್ಯವಸ್ಥೆಯನ್ನು ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಭಟ್ಕಳ ಮತ್ತು ಭಟ್ಕಳದ ನೆರೆಹೊರೆಯ ನಿವಾಸಿಗಳನ್ನು ಹೊತ್ತು ಯುಎಇಯ ರಾಸಲ್ ಖೈಮಾದಿಂದ 175 ಆಸನಗಳಿರುವ ವಿಮಾನ ಜೂನ್ 11ರಂದು ದುಬೈ ಮೂಲಕ ಮಂಗಳೂರಿಗೆ ಪ್ರಯಾಣ ಬೆಳೆಸಲಿದೆ. ಎಂಬ ಅಧಿಕೃತ ಮಾಹಿತಿ ದೊರಕಿದೆ. ಈ ಕುರಿತಂತೆ ಭಾರತೀಯ ರಾಯಭಾರಿ ಕಚೇರಿ, ವಿಮಾನಯಾನದ ಅಧಿಕಾರಿಗಳು, ಉತ್ತರಕನ್ನಡ ಜಿಲ್ಲಾಧಿಕಾರಿ ಮತ್ತು ಸಂಬಂಧಿತ ಎಲ್ಲಾ ಅಧಿಕಾರಿಗಳೊಂದಿಗೆ ಮಾತುಕತೆ ಅಂತಿಮಗೊಂಡಿದೆ ಎನ್ನಲಾಗಿದೆ.
ದುಬೈಯಲ್ಲಿ ವಾಸಿಸುತ್ತಿರುವ ಭಟ್ಕಳ ಸುತ್ತಮುತ್ತಲ ಪ್ರದೇಶದ ನಾಗರಿಕರು ತಾಯ್ನಾಡಿಗೆ ಹೋಗಲು ಬಯಸಿದರೆ ಕೂಡಲೇ ತಮ್ಮನ್ನು ಸಂಪರ್ಕಿಸುವಂತೆ ಮುನೀರಿ ಕೋರಿಕೊಂಡಿದ್ದಾರೆ. ವಿಮಾನಯಾನ ಮತ್ತು ಭಟ್ಕಳದಲ್ಲಿ ಕ್ವಾರಂಟೈನ್ ಖರ್ಚು ಸೂಕ್ತ ಮತ್ತು ಸಮಂಜಸವಾಗಿರುತ್ತದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಜಿಲಾನಿ ಮೊಹ್ತೆಶಮ್ (0505584203), ರಹಮತುಲ್ಲಾ ರಾಹಿ (0505643432), ಶೆಹರ್ಯಾರ್ ಖತೀಬ್ (0505560640), ಯಾಸಿರ್ ಖಾಸಿಂಜಿ (0506251833), ಆಫಾಖ್ ನಾಯ್ತೆ (0505845537)ರನ್ನು ಸಂಪರ್ಕಿಸಬೇಕೆಂದು ಮತ್ತು ಪಾಸ್ಪೋರ್ಟ್ ಪ್ರತಿ ಇತ್ಯಾದಿಗಳ ದಾಖಲೆಯನ್ನು ngtairline@hotmail.com ವಿಳಾಸಕ್ಕೆ ಕಳುಹಿಸಬೇಕೆಂದು ಮುನೀರಿ ಮನವಿ ಮಾಡಿದ್ದಾರೆ.
ವಿಮಾನ ನಿಲ್ದಾಣಕ್ಕೆ ಬಸ್ ಸೇವೆ:
ದುಬೈಯಿಂದ ರಾಸಲ್ ಖೈಮಾ ವಿಮಾನ ನಿಲ್ದಾಣಕ್ಕೆ ಬಸ್ ವ್ಯವಸ್ಥೆ ಮಾಡಲಾಗಿದೆ. ಅದರಂತೆ ಮಂಗಳೂರು ವಿಮಾನ ನಿಲ್ದಾಣದಿಂದ ಭಟ್ಕಳಕ್ಕೆ ವಿಶೇಷ ಬಸ್ ಇರಲಿದೆ. ಭಟ್ಕಳದಲ್ಲಿ ಮಜ್ಲಿಸೆ ಇಸ್ಲಾಹ್-ವ-ತಂಝಿಮ್ ಸಂಸ್ಥೆಯ ಮುಖಂಡರೊಂದಿಗೆ ಸಂಪರ್ಕಿಸಿ ಭಟ್ಕಳದಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡುವ ಕುರಿತಂತೆ ಮಾತುಕತೆ ನಡೆದಿದ್ದು ಅರ್ಷದ್ ಮೊಹತೆಶಮ್ ಎಂಬುವವರು ಉತ್ತರ ಕನ್ನಡ ಜಿಲ್ಲಾಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.