ಶಿರಸಿ (ಉತ್ತರಕನ್ನಡ): ಕಾಂಗ್ರೆಸ್ ಪಕ್ಷ ಯಾರನ್ನೋ ಓಲೈಕೆ ಮಾಡಲು, ಎಡಪಂಥೀಯ ವಿಚಾರಧಾರೆಯನ್ನು ಓಲೈಕೆ ಮಾಡಲು ಶಿಕ್ಷಣವನ್ನು ಸಮಸ್ಯಾತ್ಮಕವಾಗಿ ಮಾಡಬಾರದು ಎಂದು ಮಾಜಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಶಿರಸಿಯಲ್ಲಿನ ರಾಘವೇಂದ್ರ ಸರ್ಕಲ್ನಲ್ಲಿರುವ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ದೇಶದ ನೈಜ ಪರಿಸ್ಥಿತಿ ತಿಳಿಸುವ ವಿಷಯ ಇಂದಿನ ಪಠ್ಯ ಪುಸ್ತಕದಲ್ಲಿದೆ. ಆದರೆ ಕಾಂಗ್ರೆಸ್ ರಾಜಕೀಯ ಸಿದ್ಧಾಂತದಲ್ಲಿ ಯೋಚಿಸಿ, ಎಡಪಂಥೀಯ ಕೈಗೊಂಬೆಯಾಗಿ ಮುಖ್ಯಮಂತ್ರಿಯೂ ವರ್ತಿಸುತ್ತಿದ್ದಾರೆ. ಇದೇ ಕಾರಣದಿಂದ ಈಗ ಪಠ್ಯ ಪುಸ್ತಕ ಪುನರ್ ರಚನೆಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಖಾತೆ ಹಂಚಿಕೆ ಮಾಡಿ ಇನ್ನೂ ಒಂದು ತಿಂಗಳೂ ಆಗಿಲ್ಲ. ಪ್ರಾಥಮಿಕ, ಪ್ರೌಢ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಸಚಿವರು ಮೊದಲು ಇಲಾಖೆಯ ಬಗ್ಗೆ ತಿಳಿದುಕೊಳ್ಳಲಿ. ಇಲಾಖೆಯ ಮಹತ್ವ, ವ್ಯಾಪ್ತಿ ತಿಳಿದುಕೊಳ್ಳಲಿ. ಈಗಾಗಲೇ ವಿದ್ಯಾರ್ಥಿಗಳಿಗೆ ಪುಸ್ತಕ ಹಂಚಿಕೆಯಾಗಿದೆ. ಶೈಕ್ಷಣಿಕ ತರಗತಿ ಆರಂಭವಾಗಿದೆ. ಈಗ ಗೊಂದಲ ಉಂಟು ಮಾಡುವುದು ಸರಿಯಲ್ಲ ಎಂದು ಹೇಳಿದರು. ಗುಲಾಮಿತನದ ಮನಸ್ಥಿತಿ ತರಲು ಕಾಂಗ್ರೆಸ್ ಪಠ್ಯ ಪುಸ್ತಕ ಬದಲಾವಣೆಗೆ ಚಿಂತನೆ ನಡೆಸಿದೆ. ಆದರೆ ಬಿಜೆಪಿ ಉತ್ತಮ ಜೀವನ ರೂಪಿಸಲು ಜಾರಿಗೆ ತಂದಿರುವ ಶಿಕ್ಷಣ ನೀತಿಯನ್ನು, ಪುಸ್ತಕಗಳನ್ನು ಮುಂದುವರೆಸಬೇಕು. ಇಲ್ಲದಿದ್ದಲ್ಲಿ ಖಂಡಿತ ಹೋರಾಟ ಮಾಡುತ್ತೇವೆ ಎಂದರು.
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಈಗ ಆರಂಭ ಆಗಿರುವ ಕಾಂಗ್ರೆಸ್ ಸರ್ಕಾರ ರಾಜ್ಯದ ನಿರೀಕ್ಷೆಯನ್ನು ಹುಸಿಗೊಳಿಸುತ್ತಿದ್ದಾರೆ. ಆಡಳಿತವನ್ನು ಗೊಂದಲದ ಗೂಡು ಮಾಡಿದ್ದಾರೆ. ಸಚಿವರು ಖಾತೆ ತಿಳಿದುಕೊಳ್ಳುವ ಮೊದಲು ಗೊಂದಲದಲ್ಲಿ ಮುಳುಗಿರುವ ಸ್ಥಿತಿ ಬಂದಿದೆ. ವಿಶೇಷವಾಗಿ ಗ್ಯಾರಂಟಿ ಗೊಂದಲದಲ್ಲಿ ಆಡಳಿತ ನಡೆಸಲು ಆಗುತ್ತದೆಯೇ ಇಲ್ಲವೇ ಎಂದಾಗಿದೆ. ಕಾಂಗ್ರೆಸ್ ಅಭಿವೃದ್ಧಿ ಮಾಡಲು ಆಗದಾಗ ಗೊಂದಲ ಸೃಷ್ಟಿ ಮಾಡಿ ಜನರ ಮನಸ್ಸನ್ನು ಬೇರೆಡೆಗೆ ತಿರುಗಿಸುತ್ತದೆ. ಅಭಿವೃದ್ಧಿ ಮರೆಮಾಚುವ ಕಾರಣದಿಂದ ಗೊಂದಲದತ್ತ ಜನರು ಮುಖ ಮಾಡುವಂತೆ ಮಾಡಿದೆ ಎಂದು ಆರೋಪಿಸಿದರು.