ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸೌಂದರ್ಯ ಸವಿಯಲು ವಿದೇಶಗಳಿಂದ ಪ್ರವಾಸಿಗರು ಆಗಮಿಸುವುದು ಸಾಮಾನ್ಯ. ಹೀಗೆ ಬಂದಂತಹ ಪ್ರವಾಸಿಗರು ಇಲ್ಲಿಯೇ ಬೀಡುಬಿಟ್ಟು ವ್ಯಾಪಾರ ಸೇರಿದಂತೆ ಒಂದಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದೀಗ ಗೋಕರ್ಣದಲ್ಲಿ ವಿದೇಶಿ ಮಹಿಳೆಯೋರ್ವಳು ರಸ್ತೆ ಬದಿಯಲ್ಲಿ ಪಿಟೀಲು (ವಯಲಿನ್) ನುಡಿಸುತ್ತಾ ಕಾಸು ಸಂಪಾದಿಸುತ್ತಿರುವುದು ಗಮನ ಸೆಳೆದಿದೆ.
ಸಾಮಾನ್ಯವಾಗಿ ವಿದೇಶಕ್ಕೆ ಉದ್ಯೋಗ ಅರಸಿ ಹೋಗುವವರು ಉದ್ಯೋಗದಲ್ಲಿ ನಿರತರಾಗುತ್ತಾರೆ. ಪ್ರವಾಸಕ್ಕಾಗಿ ಹೋದವರು ಪ್ರವಾಸ ಸ್ಥಳಗಳಿಗೆ ಭೇಟಿ ನೀಡಿ ಬರುತ್ತಾರೆ. ಆದರೆ ಧಾರ್ಮಿಕ ಹಾಗೂ ಪ್ರವಾಸಿ ಕ್ಷೇತ್ರವಾಗಿರುವ ಕುಮಟಾ ತಾಲ್ಲೂಕಿನ ಗೋಕರ್ಣಕ್ಕೆ ಬರುವ ವಿದೇಶಿಗರು ವಿವಿಧ ಬಗೆಯಲ್ಲಿ ಹಣ ಸಂಪಾದನೆಗೆ ಮುಂದಾಗಿದ್ದಾರೆ.
ಕಳೆದೆರಡು ದಿನಗಳಿಂದ ವಿದೇಶಿ ಪ್ರವಾಸಿ ಮಹಿಳೆಯೊಬ್ಬರು ಚಿಕ್ಕ ಪಿಟೀಲು ನುಡಿಸುತ್ತಾ ಅಲ್ಲಲ್ಲಿ ನಿಂತು ಹಣ ಪಡೆಯುತ್ತಿರುವುದು ಸ್ಥಳೀಯರು ಹಾಗೂ ಪ್ರವಾಸಿಗರಲ್ಲಿ ಕುತೂಹಲ ಮೂಡಿಸಿತು. ಸಾರ್ವಜನಿಕ ಸ್ಥಳದಲ್ಲಿ ನಿಂತು ತನ್ನ ವಯಲಿನ್ ತುಂಬುವ ಪೆಟ್ಟಿಗೆಯನ್ನು ನೆಲದ ಮೇಲಿಟ್ಟು ತಾವೇ ಮೊದಲು ಅದಕ್ಕೆ ಹಣ ಹಾಕಿ ಜನರೂ ತಮ್ಮಿಷ್ಟದ ಹಣ ನೀಡುವಂತೆ ಸೂಚಿಸಿದರು. ಕೆಲಹೊತ್ತು ಪಿಟೀಲು ಬಾರಿಸುವ ಮೂಲಕ ಜನರನ್ನು ಆಕರ್ಷಿಸಿ ಆ ಮೂಲಕ ಹಣಗಳಿಕೆಯ ಹಾದಿ ಕಂಡುಕೊಂಡರು.
ವಿದೇಶದಲ್ಲಿದು ಕಾಮನ್:ವಿದೇಶಗಳಲ್ಲಿ ಈ ರೀತಿ ಹೊಟ್ಟೆಪಾಡಿಗಾಗಿ ಸಾರ್ವಜನಿಕವಾಗಿ ಸಂಗೀತ ವಾದ್ಯ ನುಡಿಸಿ, ಮನರಂಜನಾ ಕಾರ್ಯಕ್ರಮ ನೀಡಿ ಪ್ರೇಕ್ಷಕರಿಂದ ಹಣ ಪಡೆಯುವುದು ಕಾಮನ್. ಆದರೆ ಇತ್ತೀಚಿಗೆ ವಿದೇಶದ ಈ ಸಂಸ್ಕೃತಿ ಗೋಕರ್ಣವನ್ನೂ ತಲುಪಿತೇ ಎನ್ನುವಂತೆ ಭಾಸವಾಗುತ್ತಿದೆ. ಈಗಾಗಲೇ ಇಲ್ಲಿನ ಕುಡ್ಲೇ ಕಡಲತೀರ ಬಹುತೇಕ ವಿದೇಶಿಗರ ತಾಣವಾಗಿ ಮಾರ್ಪಾಟಾಗಿದೆ.