ಭಟ್ಕಳ: ಅವೈಜ್ಞಾನಿಕ ಕಿರುಸೇತುವೆಯ ಕಾಮಗಾರಿಯ ಪರಿಣಾಮ ಮಂಡಳ್ಳಿ ಪಂಚಾಯಿತಿ ವ್ಯಾಪ್ತಿಯ ಜೋಗಿಮನೆ ಗ್ರಾಮ ಮುಳುಗಡೆ ಭೀತಿ ಅನುಭವಿಸುತ್ತಿದೆ.
ಭಟ್ಕಳ ತಾಲೂಕಿನ ಮುಂಡಳ್ಳಿ ಪಂಚಾಯಿತಿ ವ್ಯಾಪ್ತಿಯ ಜೋಗಿಮನೆ ಸಮುದ್ರದ ಉಪ್ಪು ನೀರು ಹಾಗೂ ಮಳೆ ನೀರಿನಿಂದ ಆವೃತ್ತವಾಗಿದ್ದು ಕೃತಕ ಕೆರೆಯಂತಾಗಿದೆ. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವ ಔದಾರ್ಯವನ್ನು ಸಹ ತೋರಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂಡಳ್ಳಿಯ ಬಾಬು ಮಾಸ್ತರ ಮನೆಯ ಬಳಿ ಪುಟ್ ಬ್ರಿಡ್ಜ್ (ಕಿರು ಸೇತುವೆ) ಅವೈಜ್ಞಾನಿಕ ಕಾಮಗಾರಿಯೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣ.
ಒಂದು ಬದಿಯಲ್ಲಿ ಮುಂಡಳ್ಳಿ ಸಮುದ್ರ, ಇನ್ನೊಂದು ಬದಿಯಲ್ಲಿ ಶರಾಬಿ ಹೊಳೆ. ಇದರ ಮಗ್ಗುಲಲ್ಲೆ ಪುಟ್ಟ ಗ್ರಾಮ ಜೋಗಿಮನೆ. ಎಂತಹ ಮಳೆ ಬಂದರೂ, ಸಮುದ್ರ ಕೊರೆತ ಉಂಟಾದರೂ ಇಲ್ಲಿನ ಜನಕ್ಕೆ ಉಪ್ಪು ನೀರು ಹೊಕ್ಕುವ ಸಮಸ್ಯೆ ಇಲ್ಲಿಯವರೆಗೆ ತಲೆದೋರಿಲ್ಲ. ಯಾವಾಗ ಸೇತುವೆಯ ಕಾಮಗಾರಿ ಆರಂಭವಾಯಿತೋ ಆವಾಗಿಂದ ಇಲ್ಲಿನವರು ಒಂದಲ್ಲಾ ಒಂದು ಸಮಸ್ಯೆ ಅನುಭವಿಸುತ್ತಿದ್ದಾರೆ.
ಕಿರುಸೇತುವೆ ಅವೈಜ್ಞಾನಿಕ ಕಾಮಗಾರಿಯಿಂದ ಗ್ರಾಮ ಮುಳುಗಡೆ ಭೀತಿ ಸೇತುವೆ ನಿರ್ಮಾಣಕ್ಕೆ ತಡೆಗೋಡೆ..!
ಸಣ್ಣ ನಿರಾವರಿ ಇಲಾಖೆಯಿಂದ ನಿರ್ಮಾಣವಾಗುತ್ತಿದ್ದ ಕಿರು ಸೇತುವೆ ಕಟ್ಟಲೆಂದು ನದಿ ಬದಿಯ ಸ್ಥಳದಲ್ಲಿ ಒಡ್ಡು ಹಾಕಿ ನೀರು ಒಳ ಬರದಂತೆ ಮಣ್ಣಿನ ತಾತ್ಕಾಲಿಕ ಗೋಡೆಯನ್ನು ನಿರ್ಮಿಸಲಾಗಿದೆ. ಆದರೆ ಸಮುದ್ರದ ಬರ್ತ (ನೀರು ಉಕ್ಕಿ ಬರುವ ಸಂದರ್ಭ)ದಲ್ಲಿ ಒಳಗೆ ಬಂದ ನೀರು ಜೋಗಿಮನೆ ಪ್ರದೇಶದತ್ತ ಶೇಖರಣೆಯಾಗಲು ಆರಂಭವಾಗಿದೆ. ಪರಿಣಾಮ ನೀರು ಆ ಪ್ರದೇಶದಲ್ಲಿ ದಿನಕಳೆದಂತೆ ಜಾಸ್ತಿ ಆಗುತ್ತಾ ಹೋಯಿತು. ಒಮ್ಮೆ ಒಳ ಬಂದ ನೀರು ಹೊರಹೋಗಲು ಸಾಧ್ಯವಾಗದೆ ಅಲ್ಲಿಯೇ ನಿಲ್ಲಲು ಆರಂಭವಾಯಿತು. ಕನಿಷ್ಠ ನೀರು ಹೋಗಲು ದೊಡ್ಡ ಪೈಪ್ ಆದರೂ ಅಳವಡಿಸಿದರೆ ಇಷ್ಟೆಲ್ಲಾ ಸಮಸ್ಯೆ ಉದ್ಭವವಾಗುತ್ತಿರಲಿಲ್ಲ ಎನ್ನುತ್ತಾರೆ ಸ್ಥಳೀಯರು. ಇನ್ನು ಇತ್ತೀಚೆಗೆ ಕರಾವಳಿ ತೀರಕ್ಕೆ ಅಪ್ಪಳಿಸಿದ ಚಂಡಮಾರುತ ಮತ್ತಷ್ಟು ನೀರು ನುಗ್ಗುವಂತೆ ಮಾಡಿದೆ. ಪರಿಣಾಮ ಗದ್ದೆಯಂಚಿನಲ್ಲಿದ್ದ ಮನೆಗಳಿಗೆ ಹೊಕ್ಕಿದ ಉಪ್ಪುನೀರು ಜನರ ಬದುಕನ್ನೆ ದುಸ್ತರವಾಗಿಸಿದೆ.
ಈ ಬಗ್ಗೆ ಮುಂಡಳ್ಳಿ ಗ್ರಾ.ಪಂ ಸದಸ್ಯ ಗೋವಿಂದ ಮೊಗೇರ ಮಾತನಾಡಿ, ಕಿರು ಸೇತುವೆ ನಿರ್ಮಾಣದ ಆರಂಭದ ದಿನದಲ್ಲೆ ಈ ಕುರಿತು ಎಚ್ಚರಿಕೆ ನೀಡಿದ್ದೆ. ನಂತರ ನೀರು ತುಂಬುವಾಗಲು ಪದೇ ಪದೆ ಅವರಿಗೆ ತಿಳಿ ಹೇಳುತ್ತಿದ್ದೆ. ಆದರೂ ನನ್ನ ಮಾತನ್ನು ಕಿವಿಗೆ ಹಾಕಿಕೊಂಡಿಲ್ಲ. ನಂತರ ಶಾಸಕರನ್ನು ಸ್ಥಳಕ್ಕೆ ಕರೆಸಿ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದೆ. ಅಂದು ಸಣ್ಣ ನೀರಾವರಿ ಇಂಜಿನಿಯರ್ ಶಾಸಕರನ್ನು ದಿಕ್ಕು ತಪ್ಪಿಸಿದ್ದರು. ಇಂದು ಇಲ್ಲಿನ ನೂರಾರು ಜನರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಮನೆಯ ಎದುರು ಬಾವಿ ಇದ್ದರೂ ಕುಡಿಯುವ ನೀರಿಗಾಗಿ ದೂರ ಹೋಗುವ ಸ್ಥಿತಿ ನಿರ್ಮಾಣವಾಗಿದೆ ಎಂದರು.