ಕಾರವಾರ:ಆಳ ಸಮುದ್ರದಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗುತ್ತಿರುವ ಸುವರ್ಣ ತ್ರಿಭುಜ ಬೋಟನ್ನು ಒಂದು ವಾರದಲ್ಲಿ ಮೇಲಕ್ಕೆತ್ತಬೇಕು. ಇಲ್ಲವೇ ಬೋಟನ್ನು ಎತ್ತಲು ಮೀನುಗಾರರಿಗೆ ಅನುಮತಿ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಮೀನುಗಾರರು ನಿರ್ಣಯಿಸಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಸಮಸ್ತ ಮೀನುಗಾರ ಮುಖಂಡರು ಕುಮಟಾದಲ್ಲಿ ಸಭೆ ನಡೆಸಿ, ಉಡುಪಿಯ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ ಉತ್ತರಕನ್ನಡದ ಐವರು, ಉಡುಪಿಯ ಇಬ್ಬರು ಮೀನುಗಾರರು ಏನಾದರು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ ಇತ್ತೀಚೆಗೆ ನೌಕಾನೆಲೆಯು ಮಹಾರಾಷ್ಟ್ರದ ಮಾಲ್ವಾನ್ ಆಳ ಸಮುದ್ರದಲ್ಲಿ ಸುವರ್ಣ ತ್ರಿಭುಜ ಬೋಟ್ ಪತ್ತೆಯಾಗಿರುವ ಬಗ್ಗೆ ಅಧಿಕೃತ ಮಾಹಿತಿ ನೀಡಿತ್ತು.
ಆದರೆ ಮೀನುಗಾರರು ಏನಾದರು ಎಂಬುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಸದ್ಯ ನೌಕಾನೆಲೆಯ ಅಧಿಕಾರಿಗಳು ಬೋಟ್ ಸಿಕ್ಕಿದೆ ಎಂದು ಹೇಳಿ ಬಿಡುಗಡೆಗೊಳಿಸಿದ ಬೋಟ್ ನ ಚಿತ್ರಗಳು ಹಾಗೂ ವಿಷಯ ಮೀನುಗಾರರಲ್ಲಿ ಹಲವು ಅನುಮಾನಗಳು ಮೂಡುವಂತೆ ಮಾಡಿದೆ. ಸದ್ಯ ಬಿಡುಗಡೆ ಮಾಡಿರುವ ಚಿತ್ರದಲ್ಲಿ ಸ್ಪಷ್ಟವಾಗಿ ಹೆಸರು ಕಾಣಿಸುತ್ತಿದೆ. ಆದರೆ ನಾಪತ್ತೆಯಾಗಿ ನಾಲ್ಕು ತಿಂಗಳಾದರೂ ಬೋಟಿಗೆ ಪಾಚಿ ಬೆಳೆಯದಿರುವುದು ಮೀನುಗಾರರಲ್ಲಿ ಅನುಮಾನ ಮೂಡಿಸಿದೆಯಂತೆ.
ಸುವರ್ಣ ತ್ರಿಭುಜ ಬೋಟ್ ಮೇಲೆತ್ತಲು ಆಗ್ರಹ ಇನ್ನು ಇದೇ ಪ್ರದೇಶದಲ್ಲಿ ಈ ಹಿಂದೆ ನೌಕಾನೆಲೆ ಬೋಟ್ ಸಾಕಷ್ಟು ಹುಡುಕಾಟ ನಡೆಸಿತ್ತು. ಆದರೆ ಅಂದು ಪತ್ತೆಯಾಗದಿರುವುದು ಚುನಾವಣೆ ಬಳಿಕ ಪತ್ತೆಯಾಗಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಇದಲ್ಲದೆ ಬೋಟ್ ಪತ್ತೆಯಾಗಿದೆ ಎಂದು ಹೇಳಿದ ನೌಕಾನೆಲೆಯವರು ಬಳಿಕ ಅದನ್ನು ಮೇಲಕ್ಕೆ ಎತ್ತುವ ಯಾವುದೇ ಪ್ರಯತ್ನ ನಡೆಸಿಲ್ಲ. ಜತೆಗೆ ಮೀನುಗಾರರು ಏನಾದರು ಎಂಬುದನ್ನು ಕೂಡ ಸ್ಪಷ್ಟಪಡಿಸಿಲ್ಲ ಎಂದು ಮೀನುಗಾರರು ಬೇಸರ ವ್ಯಕ್ತಪಡಿಸಿದ್ದಾರೆ.
ಮೀನುಗಾರಿಕಾ ಇತಿಹಾಸದಲ್ಲಿಯೇ ಇಂತಹದೊಂದು ಅವಘಡ ಮೊದಲ ಬಾರಿ ನಡೆದಿದ್ದು, ಇದನ್ನು ಸರ್ಕಾರಗಳು ನಿರ್ಲಕ್ಷಿಸುತ್ತಿವೆ ಎಂದು ಆರೋಪಿಸಿದರು. ಅಂತಿಮವಾಗಿ ಸಭೆಯಲ್ಲಿ ಆಳಸಮುದ್ರದಲ್ಲಿ ಮುಳುಗಡೆಯಾದ ಬೋಟನ್ನು ಒಂದು ವಾರದಲ್ಲಿ ಎತ್ತಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಇದು ಸಾಧ್ಯವಾಗದೆ ಇದ್ದಲ್ಲಿ ಬೋಟ್ ಎತ್ತಲು ಮೀನುಗಾರರಿಗೆ ಅವಕಾಶ ನೀಡಬೇಕು. ನಾಪತ್ತೆಯಾದ ಮೀನುಗಾರರನ್ನು ಹುಡುಕಬೇಕು. ಇಲ್ಲವೇ ಅವರು ಏನಾದರು ಎಂಬುದರ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಲು ನಿರ್ಣಯಿಸಿದರು.
ಇದಲ್ಲದೆ ನೌಕಾನೆಲೆ ಬೋಟ್ ಡಿಕ್ಕಿ ಹೊಡೆದು ಅವಘಡ ಸಂಭವಿಸಿದ ಅನುಮಾನ ಆರಂಭದಿಂದಲು ಮೀನುಗಾರ ವಲಯದಲ್ಲಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ನೌಕಾನೆಲೆ ಹಡಗು ಡಿಕ್ಕಿ ಹೊಡೆದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜತೆಗೆ ಮೀನುಗಾರ ಕುಟುಂಬದವರಿಗೆ ಸೂಕ್ತ ಪರಿಹಾರದೊಂದಿಗೆ ನೌಕಾನೆಲೆಯಲ್ಲಿ ಅನುಕಂಪದ ಆಧಾರದ ಮೇಲೆ ಉದ್ಯೋಗವನ್ನು ನೀಡುವಂತೆ ಒತ್ತಾಯಿಸಲು ಮೀನುಗಾರರ ಸಂಘದ ಸದಸ್ಯರು ನಿರ್ಣಯಿಸಿದರು.
ಈ ಎಲ್ಲ ಬೇಡಿಕೆಗಳನ್ನು ಬುಧವಾರ ಜಿಲ್ಲಾಧಿಕಾರಿ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಒತ್ತಾಯಿಸಲಾಗುವುದು. ಸರ್ಕಾರ ಒಂದು ವಾರದಲ್ಲಿ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಇದ್ದಲ್ಲಿ ಸಮಸ್ತ ಮೀನುಗಾರರು ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ರವಾನಿಸಿದ್ದಾರೆ.