ಕಾರವಾರ: ಹತ್ತು ಹಲವು ಪ್ರವಾಸಿ ತಾಣಗಳನ್ನು ಒಡಲೊಳಗೆ ಬಚ್ಚಿಟ್ಟುಕೊಂಡು ಪ್ರವಾಸಿಗರ ಪಾಲಿಗೆ ಸ್ವರ್ಗದಂತಿರುವ ಉತ್ತರ ಕನ್ನಡಕ್ಕೆ ನಿತ್ಯವೂ ಸಾವಿರಾರು ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಹೀಗೆ ಬಂದವರು ಕಡಲತೀರ, ಧಾರ್ಮಿಕ ಕ್ಷೇತ್ರ, ಹಚ್ಚ ಹಸಿರಿನ ಪರಿಸರದ ನಡುವಿನ ಟ್ರಕ್ಕಿಂಗ್ ಜೊತೆಗೆ ಜಿಲ್ಲೆಯಲ್ಲಿನ ಜಲಸಾಹಸಿ ಕ್ರೀಡೆಗಳನ್ನು ಹೆಚ್ಚು ಎಂಜಾಯ್ ಮಾಡುತ್ತಾರೆ. ಆದರೆ, ಈ ಜಲಸಾಹಸಿ ಚಟುವಟಿಕೆಗಳತ್ತ ಆಕರ್ಷಿತರಾಗುವ ಪ್ರವಾಸಿಗರಿಗೆ ಇದೀಗ ಒಂದೇ ಆ್ಯಪ್ ಮೂಲಕ ಆನ್ಲೈನ್ ಟಿಕೆಟ್ ನೀಡಿ ಆ ಮೂಲಕ ಡಿಜಿಟಲ್ ಸ್ಪರ್ಶ ನೀಡಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.
ಹೌದು, ಒಂದೆಡೆ ವಿಶಾಲವಾದ ಕರಾವಳಿ ತೀರ, ಇನ್ನೊಂದೆಡೆ ಪಶ್ಚಿಮಘಟ್ಟಗಳ ಸರಣಿಯನ್ನು ಹೊಂದಿರುವ ವಿಶಿಷ್ಠ ಜಿಲ್ಲೆ ಉತ್ತರ ಕನ್ನಡ ಪ್ರವಾಸೋದ್ಯಮಕ್ಕೆ ಸಾಕಷ್ಟು ಹೆಸರುವಾಸಿಯಾಗಿದೆ. ಇಂತಹ ಜಿಲ್ಲೆಗೆ ಪ್ರತಿವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿ ಎಂಜಾಯ್ ಮಾಡಿ ತೆರಳುತ್ತಾರೆ. ಅದರಲ್ಲಿಯೂ ಮುರುಡೇಶ್ವರ, ಕಾರವಾರ, ಹೊನ್ನಾವರ, ದಾಂಡೇಲಿ ಭಾಗದಲ್ಲಿನ ಜಲಸಾಹಸಿ ಕ್ರೀಡೆಗಳತ್ತ ಹೆಚ್ಚು ಜನರು ಆಕರ್ಷಿತರಾಗುತ್ತಾರೆ.
ಆದರೆ, ಹೀಗೆ ಬಂದು ಎಂಜಾಯ್ ಮಾಡಿ ತೆರಳಿದರೂ ಈವರೆಗೂ ಯಾವೆಲ್ಲ ಸ್ಥಳಗಳಿಗೆ ಎಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ? ಅದರಿಂದಾಗಿ ಎಷ್ಟೆಲ್ಲಾ ಆದಾಯ ಬಂದಿದೆ? ಎನ್ನುವ ನಿಖರ ಮಾಹಿತಿ ಪ್ರವಾಸೋದ್ಯಮ ಇಲಾಖೆಗೆ ಸಿಗುತ್ತಿರಲಿಲ್ಲ. ಒಂದು ಅಂದಾಜಿನಲ್ಲಿಯೇ ಲೆಕ್ಕ ಹಾಕಿ ಸೌಲಭ್ಯ ಸೇರಿದಂತೆ ಮೂಲ ವ್ಯವಸ್ಥೆ ಕಲ್ಪಿಸಲಾಗುತ್ತಿತ್ತು. ಆದರೆ, ಇದೀಗ ಪ್ರವಾಸೋದ್ಯಮ ಇಲಾಖೆ ಅಡಿ ಟಿಕೆಟ್ ಸೌಲಭ್ಯವಿರುವ ಎಲ್ಲ ಪ್ರವಾಸಿತಾಣಗಳಲ್ಲಿ ಒಂದೇ ವ್ಯವಸ್ಥೆಯಡಿ ಟಿಕೆಟ್ ನೀಡಲು ಆ್ಯಪ್ ರೂಪಿಸಲಾಗಿದೆ. ಈ ಮೂಲಕ ಜಿಲ್ಲೆಯ ಪ್ರವಾಸೋದ್ಯಮಕ್ಕೂ ಡಿಜಿಟಲ್ ಸ್ಪರ್ಶ ನೀಡಲಾಗುತ್ತಿದೆ.
ಜಿಲ್ಲೆಯ ಪ್ರಮುಖ ಜಲಸಾಹಸಿ ಪ್ರವಾಸಿ ತಾಣಗಳಲ್ಲಿ ಎಲ್ಲೆಲ್ಲಿ ಟಿಕೆಟ್ ಪಡೆದು ಪ್ರವಾಸಿಗರಿಗೆ ಅವಕಾಶ ನೀಡಲಾಗುತ್ತಿದೆಯೋ ಅಂತಹ ಎಲ್ಲ ಪ್ರವಾಸಿ ತಾಣಗಳನ್ನು ಟಿಕೆಟ್ ಇಂಟಿಗ್ರೇಷನ್ ಸಿಸ್ಟಮ್ ಅಡಿ ತರಲಾಗುತ್ತಿದೆ. ಈ ಮೂಲಕ ಆನ್‌ಲೈನ್‌ನಲ್ಲಿ ಎಲ್ಲಿಂದ ಬೇಕಾದರೂ ನೋಂದಾಯಿಸಿಕೊಳ್ಳಬಹುದಾಗಿದೆ. ಅಲ್ಲದೇ ಸ್ಥಳದಲ್ಲಿಯೇ ಬಂದು ಟಿಕೆಟ್ಗಳನ್ನು ಪಡೆಯಬಹುದು ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಜಯಂತ್ ತಿಳಿಸಿದ್ದಾರೆ.