ಕಾರವಾರ: ಮಹಾಶಿವರಾತ್ರಿ ಅಂಗವಾಗಿ ಕಾರವಾರ ತಾಲೂಕಿನ ಮಾಜಾಳಿಯಲ್ಲಿ ನಡೆದ ಏಳು ಗ್ರಾಮಗಳ ಏಳು ಪಲ್ಲಕ್ಕಿಗಳ ಉತ್ಸವ ಹಾಗೂ ಸಮುದ್ರ ಸ್ನಾನ ಸಾವಿರಾರು ಭಕ್ತರ ಸಂಭ್ರಮಕ್ಕೆ ಸಾಕ್ಷಿಯಾಯಿತು.
ಪ್ರತಿ ವರ್ಷ ಮಹಾಶಿವರಾತ್ರಿ ಬಳಿಕ ಬರುವ ಅಮವಾಸ್ಯೆಯಂದು ಮಾಜಾಳಿಯ ಕಡಲತೀರದಲ್ಲಿ ವಿಶಿಷ್ಟ ಜಾತ್ರೆ ನಡೆಯುತ್ತದೆ. ಮುಡಗೇರಿಯ ಅಂಗಡಿ ಶಿವನಾಥ, ಹೊಸಾಳಿಯ ಮಹಾದೇವ, ಅಸ್ನೋಟಿಯ ರಾಮನಾಥ, ಸದಾಶಿವಗಡದ ಮಹಾಮಾಯಾ, ಮಾಜಾಳಿ ರಾಮನಾಥ ಮತ್ತು ಕೃಷ್ಣಾಪುರದ ಮಹಾದೇವ ದೇವರುಗಳನ್ನು ಪಲ್ಲಕ್ಕಿ ಮೂಲಕ ಮಾಜಾಳಿಯ ಸಮುದ್ರ ದಂಡೆಗೆ ತಂದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ಸಾವಿರಾರು ಭಕ್ತರಿಂದ ಸಮುದ್ರ ಸ್ನಾನ:
ಪಲ್ಲಕ್ಕಿ ಜತೆಗೆ ಬಂದ ಸಾವಿರಾರು ಭಕ್ತರು ಸಮುದ್ರಕ್ಕೆ ಬಾಳೆಹಣ್ಣುಗಳನ್ನು ಎಸೆದು ಸಮುದ್ರ ಸ್ನಾನ ಮಾಡಿದರು. ಅಲ್ಲದೆ ಸಮುದ್ರ ದಂಡೆಯುದ್ದಕ್ಕೂ ಮರಳಿನಲ್ಲಿ ಶಿವನ ಲಿಂಗವನ್ನು ಮಾಡಿ, ಪೂಜೆ ಮಾಡಿ ಸಂಭ್ರಮಿಸುತ್ತಿದ್ದರು. ಇನ್ನು ವಿವಾಹಿತರು ಸಮುದ್ರ ಸ್ನಾನದ ಬಳಿಕ ಪಲ್ಲಕ್ಕಿಗೆ ವಿಶೇಷ ಪೂಜೆ ಸಲ್ಲಿಸಿ ಅರ್ಚಕರಿಗೆ ಹಣ್ಣು, ಕಾಯಿ, ಅಕ್ಕಿ, ಎಲೆ, ಅಡಿಕೆಗಳನ್ನು ಪಡಿಯ ರೂಪದಲ್ಲಿ ಅರ್ಪಿಸಿದರು.
ಕಾರವಾರ ಶಿವರಾತ್ರಿ ಸಮುದ್ರ ಸ್ನಾನಕ್ಕೆ ಹಿಂಜರಿದ ಜನ ಸಕಲ ಕಷ್ಟ ನಿವಾರಣೆಯಾಗುತ್ತದೆ:
ಇನ್ನು ಈ ಬಗ್ಗೆ ಮಾಹಿತಿ ನೀಡಿದ ವೆಂಕಟೇಶ್ ಭಟ್ ಹೊಸಾಳಿ, ಪ್ರತಿ ವರ್ಷ ಶಿವರಾತ್ರಿ ಬಳಿಕ ಬರುವ ಅಮವಾಸ್ಯೆಯಂದುಕಾರವಾರ ತಾಲೂಕಿನ ವಿವಿಧ ಭಾಗಗಳಿಂದ ಪರಶಿವನನ್ನು ಪಲ್ಲಕ್ಕಿ ಮೂಲಕ ತಂದು ಸಮುದ್ರ ದಂಡೆಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಅಲ್ಲದೆ ಇಲ್ಲಿಗೆ ಬರುವ ಭಕ್ತರು ಸಮುದ್ರ ಸ್ನಾನ ಮಾಡಿ, ಬಳಿಕ ಪೂಜೆ ಸಲ್ಲಿಸುತ್ತಾರೆ. ಹೀಗೆ ಮಾಡುವುದರಿಂದ ಸಕಲ ಕಷ್ಟಗಳು ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಇದೆ ಎಂದು ಹೇಳಿದರು.
ಸಮುದ್ರ ಸ್ನಾನಕ್ಕೆ ಭಕ್ತರ ಸಂಖ್ಯೆ ಕಡಿಮೆ:
ವಿಶೇಷವೆಂದರೆ ಈ ವರ್ಷ ಶಿವರಾತ್ರಿ ಸಮುದ್ರ ಸ್ನಾನಕ್ಕೆ ಭಕ್ತರ ಸಂಖ್ಯೆ ಸಾಕಷ್ಟು ಕಡಿಮೆಯಾಗಿದೆ. ಪ್ರತಿ ವರ್ಷ ಸುಮಾರು 30 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುತ್ತಿದ್ದರು. ಆದರೆ ಈ ವರ್ಷ ಇದರ ಅರ್ಧದಷ್ಟು ಇರಲಿಲ್ಲ. ಇದಕ್ಕೆ ಕೂರ್ಮಗಡ ದುರಂತದ ಕಾರಣವೂ ಇರಬಹುದು. ಜತೆಗೆ ಮಕ್ಕಳಿಗೆ ಪರೀಕ್ಷಾ ಸಮಯವಾಗಿದ್ದರಿಂದ ಭಕ್ತರ ಸಂಖ್ಯೆ ಕಡಿಮೆ ಇದೆ ಎನ್ನುತ್ತಾರೆ ಸ್ಥಳೀಯರು.
ಇನ್ನು ಸಮುದ್ರ ಸ್ನಾನಕ್ಕೆ ಸಾಕಷ್ಟು ಜನರು ಸೇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಕರಾವಳಿ ಪೊಲೀಸರು ಬೋಟ್ನೊಂದಿಗೆ ಸ್ಥಳದಲ್ಲಿದ್ದು ನಿಗಾ ವಹಿಸಿದ್ದರು. ಅಲ್ಲದೆ ಪೊಲೀಸರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಿರುವುದು ಕಂಡುಬಂತು.