ಕಾರವಾರ: ರಾಜ್ಯದಲ್ಲೀಗ ಸೋಂಕಿನ ರೂಪಾಂತರಿ ಒಮಿಕ್ರೋನ್ ಭೀತಿ ಜೋರಾಗಿದ್ದು, ಗಡಿ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಕೇರಳ, ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಳ್ಳುವ ಜಿಲ್ಲೆಗಳಿಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಿರುವ ಬೆನ್ನಲ್ಲೇ ಉತ್ತರಕನ್ನಡ ಜಿಲ್ಲೆಯ ಗಡಿಗಳಲ್ಲಿ ತಪಾಸಣೆಯನ್ನ ತೀವ್ರಗೊಳಿಸಲಾಗಿದೆ. ಗಡಿ ಪ್ರದೇಶವಾಗಿರುವ ಕಾರವಾರದಲ್ಲಿ ಗೋವಾ ಭಾಗದಿಂದ ಆಗಮಿಸುವ ವಾಹನಗಳನ್ನು ತೀವ್ರ ತಪಾಸಣೆ ನಡೆಸಲಾಗುತ್ತಿದೆ.
ಒಮಿಕ್ರಾನ್ ತಡೆಗೆ ಮುಂದಾದ ಜಿಲ್ಲಾಡಳಿತ ಜಿಲ್ಲೆ ನೇರವಾಗಿ ಮಹಾರಾಷ್ಟ್ರಕ್ಕೆ ಹೊಂದಿಕೊಂಡಿಲ್ಲವಾಗಿದ್ದರೂ ಕೂಡ ಗೋವಾದಿಂದ ಪ್ರಯಾಣಿಕರು ಆಗಮಿಸುವ ಸಾಧ್ಯತೆಗಳಿರುವ ಹಿನ್ನೆಲೆ ಕಾರವಾರದ ಗಡಿಯಲ್ಲಿ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಕಾರವಾರ - ಗೋವಾ ಗಡಿಯಲ್ಲಿರುವ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ಗೋವಾ ಮಾರ್ಗದಿಂದ ಪ್ರವೇಶಿಸುವ ಪ್ರತಿ ವಾಹನಗಳನ್ನು ತಡೆದು ಪರಿಶೀಲನೆ ನಡೆಸಲಾಗುತ್ತಿದೆ.
ಹೊರರಾಜ್ಯದಿಂದ ಕರ್ನಾಟಕಕ್ಕೆ ಪ್ರವೇಶಿಸುವ ಪ್ರತಿಯೊಬ್ಬರೂ ಕೋವಿಡ್ ಲಸಿಕೆ (ಎರಡು ಡೋಸ್) ಇಲ್ಲವೇ ಕೊರೊನಾ ನೆಗೆಟಿವ್ ರಿಪೋರ್ಟ್ ತರುವುದು ಕಡ್ಡಾಯ ಮಾಡಲಾಗಿದೆ. ಜೊತೆಗೆ ಮಹಾರಾಷ್ಟ್ರದಿಂದ ಬರುವವರು ಕಡ್ಡಾಯವಾಗಿ 72 ಗಂಟೆಯೊಳಗಿನ ಆರ್‌ಟಿಪಿಸಿಆರ್ ನೆಗೆಟಿವ್ ಪ್ರಮಾಣಪತ್ರವನ್ನ ನೀಡಬೇಕಾಗಿದೆ.
ಪ್ರವಾಸಿಗರ ಮೇಲೂ ನಿಗಾ:
ಜಿಲ್ಲೆಯ ಭಟ್ಕಳ ಗಡಿ ಶಿರಾಲಿಯಲ್ಲಿಯೂ ಸಹ ಕೇರಳದಿಂದ ಆಗಮಿಸುವವರ ಮೇಲೆ ನಿಗಾ ಇರಿಸಲಾಗಿದೆ. ಕಟ್ಟು ನಿಟ್ಟಿನ ತಪಾಸಣೆ ಕೈಗೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಅಲ್ಲದೇ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರ ಮೇಲೂ ಜಿಲ್ಲಾಡಳಿತ ನಿಗಾ ಇರಿಸಿದೆ.
covid test:ಜಿಲ್ಲೆಯಲ್ಲಿ ಸದ್ಯ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದು, ಪಾಸಿಟಿವಿಟಿ ದರ ಒಂದಕ್ಕಿಂತ ಕಡಿಮೆಯಾಗಿದೆ. ಆದರೂ ಮುಂಜಾಗ್ರತೆ ನಿಟ್ಟಿನಲ್ಲಿ ಜಿಲ್ಲಾಡಳಿತ ನಿಯಮಿತವಾಗಿ ಕೊರೊನಾ ತಪಾಸಣೆಯನ್ನು ನಡೆಸುತ್ತಿದ್ದು ಎಲ್ಲೆಲ್ಲಿ ಕೊರೊನಾ ಪ್ರಕರಣಗಳು ಕಂಡುಬರುತ್ತವೆಯೋ ಅಲ್ಲಲ್ಲಿ ರ್ಯಾಂಡಮ್ ಟೆಸ್ಟಿಂಗ್ ಅನ್ನು ಕೈಗೊಳ್ಳಲಾಗುತ್ತಿದೆ.
ಜಿಲ್ಲೆ ಕೇರಳ ಹಾಗೂ ಮಹಾರಾಷ್ಟ್ರ ಗಡಿಗಳಿಗೆ ಹೊಂದಿಕೊಂಡಿಲ್ಲವಾಗಿದ್ದರೂ ಸಹ ಜಿಲ್ಲೆಯ ಕರಾವಳಿ ಗಡಿಯಾದ ಕಾರವಾರ ಹಾಗೂ ಭಟ್ಕಳದಲ್ಲಿ ಈಗಾಗಲೇ ತಪಾಸಣಾ ಕೇಂದ್ರಗಳನ್ನು ಪ್ರಾರಂಭಿಸಿದೆ. ಜೊತೆಗೆ ದೇವಸ್ಥಾನಗಳಲ್ಲಿ ಕಾರ್ಯನಿರ್ವಹಿಸುವವರು, ಸಾರ್ವಜನಿಕರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವವರು ಕಡ್ಡಾಯವಾಗಿ ಹದಿನೈದು ದಿನಗಳಿಗೆ ಒಮ್ಮೆ ಕೊರೊನಾ ತಪಾಸಣೆಗೆ ಒಳಗಾಗುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದ್ರೆ ಕ್ರಮ:
ಈಗಾಗಲೇ ಗಡಿಯಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಚೆಕ್‌ಪೋಸ್ಟ್‌ಗಳಲ್ಲಿ 24 ಗಂಟೆಯೂ ಶಿಫ್ಟ್ ಆಧಾರದಲ್ಲಿ ಕಾರ್ಯನಿರ್ವಹಿಸುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ. ಸಾರ್ವಜನಿಕರೂ ಸಹ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಾಗಿದ್ದು ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಸುಮನ್ ಡಿ ಪೆನ್ನೇಕರ್ ತಿಳಿಸಿದ್ದಾರೆ.
ಇದನ್ನೂ ಓದಿ:ಹೆಚ್ಚು HIV ಸೋಂಕಿತರಿರುವ ರಾಜ್ಯಗಳಲ್ಲಿ ಕರ್ನಾಟಕಕ್ಕೆ 16ನೇ ಸ್ಥಾನ!
ಕೊರೊನಾ ರೂಪಾಂತರಿ ಒಮಿಕ್ರೋನ್ ಆತಂಕ ಎದುರಾಗಿರುವ ಬೆನ್ನಲ್ಲೇ ಉತ್ತರಕನ್ನಡ ಜಿಲ್ಲೆಯ ಗಡಿಯಲ್ಲಿ ಬಿಗಿ ಭದ್ರತೆ ವಹಿಸಲಾಗಿದೆ. ಸಾರ್ವಜನಿಕರಿಗೂ ಸಹ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದಲ್ಲಿ ಮಾತ್ರ ಕೊರೊನಾ ತಡೆಯಬಹುದಾಗಿದೆ.