ಕಾರವಾರ:ವಿಧಾನ ಪರಿಷತ್ ಚುನಾವಣೆ (Council Election) ಬಿಜೆಪಿಯಿಂದ ಟಿಕೆಟ್ ಸಿಗದೇ ಅಸಮಾಧಾನಗೊಂಡು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಾಗಿ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ ಅಂಕೋಲಾದ ಭಾಸ್ಕರ್ ನಾರ್ವೇಕರ್ ಅವರ ಮನವೊಲಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ (Minister Shivaram Hebbar) ಯಶಸ್ವಿಯಾಗಿದ್ದು, ನಾರ್ವೇಕರ್ ಕೊನೆಗೂ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.
ಬಿಜೆಪಿಯಲ್ಲಿ ಗಣಪತಿ ಉಳ್ವೇಕರ್ (Ganapati Ulvekar) ಅವರಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಯಾಗಿದ್ದ ಭಾಸ್ಕರ್ ನಾರ್ವೇಕರ್ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಕಳೆದ 30 ವರ್ಷದಿಂದ ಪಕ್ಷದಲ್ಲಿ ನಿಷ್ಠಾವಂತರಾಗಿ ದುಡಿಯುತ್ತಿರುವ ನಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಹಿತೈಷಿಗಳನ್ನು ಕೇಳಿ ಮಂಗಳವಾರ ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದರು.
ಅದರಂತೆ ಸೋಮವಾರ ಅಂಕೋಲಾ ಮಂಡಲಾಧ್ಯಕ್ಷ ಸಂಜಯ ನಾಯಕ, ವಿಧಾನ ಪರಿಷತ್ ಅಭ್ಯರ್ಥಿ ಗಣಪತಿ ಉಳ್ವೇಕರ್, ಕಾರವಾರ ನಗರಸಭೆಯ ಅಧ್ಯಕ್ಷ ಡಾ.ನಿತಿನ್ ಪಿಕಳೆ ಸೇರಿದಂತೆ ಪ್ರಮುಖರ ಸಮ್ಮುಖದಲ್ಲಿ ಭಾಸ್ಕರ್ ನಾರ್ವೇಕರ್ (Bhaskar Narvekar) ಅವರೊಂದಿಗೆ ಯಲ್ಲಾಪುರದಲ್ಲಿ ಸಚಿವ ಶಿವರಾಮ ಹೆಬ್ಬಾರ್ ಸಭೆ ನಡೆಸಿದರು.