ಕಾರವಾರ: ಕಳೆದ ಬಾರಿ ಇದೇ ಸಂದರ್ಭ ಜಿಲ್ಲೆಯಲ್ಲಿ ಮಂಗನಕಾಯಿಲೆ ಹೆಚ್ಚಳಗೊಂಡು ಜನರನ್ನು ಆತಂಕಕ್ಕೀಡು ಮಾಡಿತ್ತು. ಮಲೆನಾಡಿನಲ್ಲಿ ಮರಣಮೃದಂಗ ಬಾರಿಸಿದ್ದ ಕ್ಯಾಸನೂರು ಫಾರೆಸ್ಟ್ ಡಿಸೀಸ್ (ಕೆಎಫ್‌ಡಿ) ಜಿಲ್ಲೆಯ 50ಕ್ಕೂ ಅಧಿಕ ಮಂದಿಯಲ್ಲಿ ಕಾಣಿಸಿಕೊಂಡಿತ್ತು. ಈ ಬಾರಿಯೂ ಸಹ ಈಗಾಗಲೇ ಓರ್ವರಲ್ಲಿ ಕೆಎಫ್‌ಡಿ ಸೋಂಕು ದೃಢಪಟ್ಟಿದ್ದು, ಮತ್ತೆ ಮಂಗನಕಾಯಿಲೆ ಜಿಲ್ಲೆಗೆ ಕಾಲಿಟ್ಟಂತಾಗಿದೆ. ಇನ್ನೇನು ಕೊರೊನಾ ಆತಂಕ ಕಡಿಮೆಯಾಯಿತು ಎನ್ನುವ ವೇಳೆಗೆ ಮಂಗನಕಾಯಿಲೆ ಆತಂಕ ಎದುರಾಗಿದ್ದು, ಗ್ರಾಮೀಣ ಭಾಗದ ಜನರಲ್ಲಿ ಭಯಭೀತಿಯನ್ನು ಉಂಟುಮಾಡಿದೆ.
ಕಳೆದ ಬಾರಿ ಜಿಲ್ಲೆಯ ಸಿದ್ದಾಪುರ ಹಾಗೂ ಹೊನ್ನಾವರ ತಾಲೂಕಿನ ಹತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ಮಂಗನಕಾಯಿಲೆ ಸೋಂಕು ಕಾಣಿಸಿಕೊಂಡಿದ್ದು, ಇದೀಗ ಸಿದ್ದಾಪುರ ಭಾಗದ ಓರ್ವ ಮಹಿಳೆಯಲ್ಲಿ ಕೆಎಫ್‌ಡಿ ದೃಢಪಟ್ಟಿದೆ. ಈಗಾಗಲೇ ಸೋಂಕಿತೆಯನ್ನು ಮಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು, ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಆದ್ರೆ ಗ್ರಾಮೀಣ ಭಾಗದಲ್ಲಿ ಕೆಎಫ್‌ಡಿ ಸೋಂಕು ಪತ್ತೆಗೆ ಯಾವುದೇ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿಲ್ಲ. ಇದು ಗ್ರಾಮೀಣ ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ. ಕೊರೊನಾ ಸೋಂಕು ಕಾಣಿಸಿಕೊಂಡ ಸಂದರ್ಭದಲ್ಲಿ ಸೋಂಕಿತರ ಪತ್ತೆಗೆ ತ್ವರಿತ ಕ್ರಮವನ್ನು ಕೈಗೊಳ್ಳುವ ಜಿಲ್ಲಾಡಳಿತ ಮಂಗನಕಾಯಿಲೆ ಪತ್ತೆಗೆ ಹೆಚ್ಚು ಗಮನಹರಿಸುತ್ತಿಲ್ಲ.
ಹೀಗಾಗಿ ಈ ಬಗ್ಗೆ ಜಿಲ್ಲಾಡಳಿತ ಕೂಡಲೇ ಗಮನಹರಿಸಬೇಕು ಅನ್ನೋದು ಗ್ರಾಮಸ್ಥರ ಅಭಿಪ್ರಾಯವಾಗಿದೆ.