ಶಿರಸಿ: ಕೇವಲ15 ತಿಂಗಳ ಹಿಂದೆ ಜಿಲ್ಲೆಯಲ್ಲಿ ಐವರು ಶಾಸಕರನ್ನು ಹೊಂದಿ ತನ್ನದೇ ಅಧಿಪತ್ಯ ಹೊಂದಿದ್ದ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಈಗ ಅಕ್ಷರಶಃ ಅಧೋಗತಿಗೆ ಬಂದು ತಲುಪಿದೆ. ಆರ್ ವಿ ದೇಶಪಾಂಡೆ ಬಿಟ್ಟರೆ ಬೇರೆ ನಾಯಕರ ಆಸರೆ ಕೈ ಪಾಳಯಕ್ಕಿಲ್ಲ.
ಕಾಂಗ್ರೆಸ್ ರೆಬೆಲ್ ಶಾಸಕ ಶಿವರಾಮ ಹೆಬ್ಬಾರ್ ಅನರ್ಹತೆಯೊಂದಿಗೆ ಕೇವಲ ಒಬ್ಬರೇ ಒಬ್ಬ ಶಾಸಕರನ್ನು ಮಾತ್ರ ಹೊಂದಿದಂತಾಗಿದೆ. 2018ರ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಜಿಲ್ಲೆಯಲ್ಲಿ ಐವರು ಶಾಸಕರನ್ನು ಹೊಂದಿದ್ದ ಕಾಂಗ್ರೆಸ್, ವಿಧಾನಸಭೆ ಚುನಾವಣೆಯ ನಂತರದಲ್ಲಿ ಕೇವಲ ಎರಡು ಸ್ಥಾನಗಳಿಗೆ ಸಿಮೀತವಾಗಿತ್ತು. ಆದರೆ, ಬದಲಾದ ರಾಜಕೀಯ ವಿದ್ಯಮಾನದಲ್ಲಿ ಕಾಂಗ್ರೆಸ್ ರೆಬೆಲ್ ಶಾಸಕ ಶಿವರಾಮ ಹೆಬ್ಬಾರ್ ಅವರ ಶಾಸಕತ್ವ ಅನರ್ಹವಾದ ಕಾರಣ ಜಿಲ್ಲೆಯಲ್ಲಿ ಈಗ ಓರ್ವ ಕಾಂಗ್ರೆಸ್ ಶಾಸಕ ಇದ್ದಾರೆ.
ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಉತ್ತರ ಕನ್ನಡವೀಗ ಕಾಂಗ್ರೆಸ್ ಮುಕ್ತ ಜಿಲ್ಲೆಯಾಗುವತ್ತ ಹೊರಟಿದೆಯೇನೋ ಎಂಬ ಆತಂಕ ಪಕ್ಷದ ವಲಯದಲ್ಲಿ ವ್ಯಕ್ತವಾಗ್ತಿದೆ. ಹಳಿಯಾಳ, ಯಲ್ಲಾಪುರ, ಕುಮಟಾ, ಭಟ್ಕಳ ಹಾಗೂ ಕಾರವಾರ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಹೊಂದಿದ್ದ ಕಾಂಗ್ರೆಸ್, ವಿಧಾನಸಭೆ ಚುನಾವಣೆಯಲ್ಲಿ ಯಲ್ಲಾಪುರ ಮತ್ತು ಹಳಿಯಾಳವನ್ನು ಮಾತ್ರ ಗೆಲ್ಲುವಲ್ಲಿ ಸಫಲವಾಗಿತ್ತು. ಅದರಲ್ಲಿ ಈಗ ಯಲ್ಲಾಪುರ ಕ್ಷೇತ್ರ ಕೈತಪ್ಪಿ ಹೋಗಿದ್ದು, ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕ ಆರ್ ವಿ ದೇಶಪಾಂಡೆ ಪ್ರತಿನಿಧಿಸುವ ಹಳಿಯಾಳ ಕ್ಷೇತ್ರ ಮಾತ್ರ ಉಳಿದುಕೊಂಡಿದೆ.