ಕಾರವಾರ: ಇನ್ನೂ 25 ವರ್ಷವಾದರೂ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಅದೊಂದು ಮುಳುಗುತ್ತಿರುವ ಹಡಗು, ಅದರಲ್ಲಿ ಕಾಲಿಡಲು ಯಾರೂ ಮುಂದಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (B.S.Yeddyurappa) ಹೇಳಿದ್ದಾರೆ.
ಯಲ್ಲಾಪುರದಲ್ಲಿ ನಡೆದ ಜನಸ್ವರಾಜ್ (BJP Jana Swaraj) ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ, ವಿಧಾನ ಪರಿಷತ್ ಚುನಾವಣೆಯಲ್ಲಿ (Karnataka Council election) ಈ ಹಿಂದೆ ಗೆಲ್ಲಲು ಸಾಧ್ಯವಾಗದ ಕ್ಷೇತ್ರದಿಂದಲೇ ಪ್ರವಾಸ ಪ್ರಾರಂಭಿಸಲಾಗಿದೆ. ನಾನೇ ಅಭ್ಯರ್ಥಿ ಎಂದು ತಿಳಿದುಕೊಂಡು ಎಲ್ಲರೂ ಕೆಲಸ ಮಾಡಬೇಕು. ಮತ್ತೊಮ್ಮೆ ಬೇಕಾದರೂ ಜಿಲ್ಲೆಗೆ ಬರಲು ಸಿದ್ಧನಿದ್ದೇನೆ. ಆದರೆ ಈ ಬಾರಿ ಗೆಲ್ಲಿಸಲೇಬೇಕು ಎಂದರು.
ದೇಶದ ಇತಿಹಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಿಕ್ಕಿರುವುದು ನಮ್ಮ ಸೌಭಾಗ್ಯ. ಅಟಲ ಬಿಹಾರ್ ವಾಜಪೇಯಿ ನಂತರ ದೇಶದಲ್ಲಿ ಅಮೂಲಾಗ್ರ ಬದಲಾವಣೆ ತರಲು ಮೋದಿ ಬಂದಿದ್ದಾರೆ. ಇನ್ನು 25 ವರ್ಷವಾದರೂ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ರಾಹುಲ್ ಗಾಂಧಿಗೆ ಎಲ್ಲಿಯೂ ಜನಮನ್ನಣೆ ಸಿಗ್ತಾ ಇಲ್ಲದ ಸ್ಥಿತಿ ನಾವು ನೋಡಿದೇವೆ ಎಂದು ಲೇವಡಿ ಮಾಡಿದರು.
ರಾಹುಲ್ ಗಾಂಧಿ ದೇಶದಲ್ಲಿ ಎಲ್ಲಿಯೂ ಜನಮನ್ನಣೆ ಸಿಗುತ್ತಿಲ್ಲ. ಆದರೆ ವಿದೇಶಕ್ಕೆ ಯಾಕೆ ಹೋಗುತ್ತಾರೋ ಬರ್ತಾರೋ ಗೊತ್ತಿಲ್ಲ. ಆ ಪಕ್ಷ ಎಷ್ಟು ದುರ್ಬಲವಾಗಿದೆ ಎಂದು ಇದರಿಂದ ಗೊತ್ತಾಗುತ್ತಿದೆ. 75 ಎಂಎಲ್ಸಿ ಇರುವ ಕಡೆ ಇನ್ನು 12 ಸದಸ್ಯರ ಅವಶ್ಯಕತೆ ಇದೆ, ಈ ಚುನಾವಣೆ ಮೂಲಕ ಸ್ಪಷ್ಟ ಬಹುಮತ ಪಡೆಯಬೇಕಾಗಿದೆ. ಇದಕ್ಕೆ ನಾವೆಲ್ಲ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಇದು ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯಿತಿ ಚುನಾವಣೆಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಗ್ರಾ.ಪಂ ಸದಸ್ಯರು ರಾಜೀನಾಮೆ ನೀಡಲು ಹಿಂದೆಮುಂದೆ ನೋಡುವ ಸಂದರ್ಭದಲ್ಲಿ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಆದರೆ ಈ ವೇಳೆ ನಾನು ಕಣ್ಣೀರು ಹಾಕಿದ್ದಕ್ಕೆ ಹಲವರು ಟೀಕೆ ಮಾಡಿದರು. ಆದರೆ ನಾನು ಕಣ್ಣೀರು ಹಾಕಿದ್ದು ನನ್ನ ಶಿಕಾರಿಪುರ ಜನ ಹಾಗೂ ರಾಜ್ಯದ ಜನ ತೋರಿದ ಪ್ರೀತಿಯಿಂದಾಗಿ ಕಣ್ಣೀರು ಬಂದಿದೆ ವಿನಾಃ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಕ್ಕಲ್ಲ. ನಾನು ಅಂದು ಶಾಸಕರು, ಸಚಿವರುಗಳಿಗೆ ಸ್ವತಃ ಸಿಹಿ ಊಟ ಹಾಕಿಸಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ತಟ್ಟೆಯಲ್ಲಿ ಕತ್ತೆ ಸತ್ತು ಬಿದ್ದಿದೆ: ಸಿದ್ದರಾಮಯ್ಯ ಹೇಳಿಕೆಗೆ ಬಿ.ಶ್ರೀರಾಮುಲು ತಿರುಗೇಟು
ನಮ್ಮ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದೆ ಎಂದು ಕಾಂಗ್ರೆಸ್ ಟೀಕೆ ಮಾಡುತ್ತಿದೆ. ಆದರೆ ಅವರ ತಟ್ಟೆಯಲ್ಲಿ ಕತ್ತೆ ಸತ್ತು ಬಿದ್ದಿರುವುದನ್ನು ಮೊದಲು ನೋಡಿಕೊಳ್ಳಲಿ ಎಂದು ಸಿದ್ದರಾಮಯ್ಯ ಅವರ ಹೇಳಿಕೆಗೆ ಸಾರಿಗೆ ಸಚಿವ ಬಿ.ಶ್ರೀರಾಮುಲು ತಿರುಗೇಟು ನೀಡಿದ್ದಾರೆ. ಹಾನಗಲ್ ಉಪಚುನಾವಣೆಯಲ್ಲಿ ಬಿಜೆಪಿ ವಿರೋಧಿ ಅಲೆಯಿಂದ ಸೋಲು ಸಂಭವಿಸಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಈ ಅಲೆ, ಸುನಾಮಿ ಎಲ್ಲ ಬಿಜೆಪಿಗಲ್ಲ, ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎದುರಿಸಬೇಕಾಗಿದೆ ಎಂದು ಹೇಳಿದರು.
ಹಿಂದುಳಿದ, ಅಲ್ಪಸಂಖ್ಯಾತರ ಮುಖಂಡರು ಹೊಟ್ಟೆಪಾಡಿಗಾಗಿ ಬಿಜೆಪಿ ಸೇರುತ್ತಿದ್ದಾರೆ ಎಂದು ಸಿದ್ಧರಾಮಯ್ಯ ಟೀಕೆ ಮಾಡಿದ್ದಾರೆ. 60 ವರ್ಷ ಅವರದೇ ನೆರವಿನಿಂದ ಆಡಳಿತ ನಡೆಸಿದ ಕಾಂಗ್ರೆಸ್ ಇವತ್ತು ಹಿಂದುಳಿದವರ ವಿರುದ್ಧ ಮಾತನಾಡುತ್ತಿದ್ದಾರೆ. ಮಾನ ಮರ್ಯಾದೆ ಇದ್ರೆ ಹಿಂದುಳಿದವರ ಬಗ್ಗೆ ಮಾತನಾಡಬೇಡಿ. ಹಿಂದುಳಿದ ವರ್ಗಗಳು ಅಭಿವೃದ್ಧಿಯಾಗದಿರಲು ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಸಿದ್ಧರಾಮಯ್ಯ ವಿರುದ್ಧ ಸಚಿವ ಶ್ರೀರಾಮುಲು ಕಿಡಿಕಾರಿದರು.