ಕಾರವಾರ: ನಿತ್ಯದ ಕೆಲಸ ಕಾರ್ಯಗಳ ನಡುವೆಯೂ ಬಹುತೇಕ ವ್ಯಕ್ತಿಗಳು ಒಂದಲ್ಲ ಒಂದು ಹವ್ಯಾಸದಲ್ಲಿ ತೊಡಗಿಕ್ಕೊಳ್ಳುತ್ತಾರೆ. ಕೆಲವರು ಉತ್ತಮ ಹವ್ಯಾಸಗಳ ಮೂಲಕ ಗುರುತಿಸಿಕೊಂಡರೇ ಇನ್ನು ಕೆಲವರು ಕೆಟ್ಟ ಹವ್ಯಾಸಗಳಲ್ಲಿಯೂ ತಲ್ಲೀನರಾಗುತ್ತಾರೆ. ಆದರೆ ಇಲ್ಲೋರ್ವ ಕೃಷಿಕರು ಬಾಲ್ಯದಿಂದಲೇ ನಾಣ್ಯ ಹಾಗೂ ಅಂಚೆ ಚೀಟಿಗಳ ಸಂಗ್ರಹಕ್ಕೆ ಬಿದ್ದು ಚೋಳರ, ಗಂಗರ ಗತಕಾಲದ ನಾಣ್ಯಗಳನ್ನು ಸಂಗ್ರಹಿಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಪ್ರದರ್ಶನ ನೀಡುತ್ತಿದ್ದಾರೆ.
ಹೌದು ಹವ್ಯಾಸವೇ ಹಾಗೆ ಒಬ್ಬೊಬ್ಬರಲ್ಲೂ ವಿಭಿನ್ನ ವಾಗಿರುತ್ತದೆ. ಸಾಹಿತ್ಯ, ಛಾಯಾಗ್ರಹಣ, ಕಲೆ, ರಂಗಭೂಮಿ ಹೀಗೆ ತಮ್ಮದೇ ಹವ್ಯಾಸಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಅದರಂತೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಲ್ಲಬ್ಬೆಯ ಕೃಷಿಕ ಚಿದಾನಂದ ಹೆಗಡೆ ಅವರು ಗತಕಾಲದಿಂದ ಹಿಡಿದು ಪ್ರಸ್ತುತವರೆಗಿನ ಸಾವಿರಾರು ನಾಣ್ಯಗಳ ಸಂಗ್ರಹಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಶಾಲಾ ದಿನಗಳಲ್ಲಿ ಸ್ಕೌಟ್ಸ್ ಗೈಡ್ಸ್ ಕ್ಯಾಂಪ್ ನಲ್ಲಿ ವಿದ್ಯಾರ್ಥಿಯೋರ್ವ ಬೆಳ್ಳಿ ನಾಣ್ಯ ಮುಟ್ಟಲು ಬಿಡದಿರುವುದನ್ನೇ ಛಲವಾಗಿ ಸ್ವೀಕರಿಸಿದ ಚಿದಾನಂದ ಹೆಗಡೆ ಇದೀಗ ಹಳೆಕಾಲದ ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ ಸೇರಿದಂತೆ ಹಳೆ ಕಾಲದ ನಾಣ್ಯಗಳ ಕಣಜವನ್ನೆ ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಕ್ರಿಸ್ತ ಶಕ 950 ರ ಚೋಳರ ಕಾಲದ ಚಿನ್ನದ ಕಿರು ನಾಣ್ಯದಿಂದ ಹಿಡಿದು ವಿಜಯನಗರದ ಕಾಲದ ವರಹಗಳು, ಈಸ್ಟ್ ಇಂಡಿಯಾ ಕಂಪನಿ ಬಿಡುಗಡೆ ಮಾಡಿದ್ದ ನಾಣ್ಯಗಳು, ಪೈಸೆಗಳೂ ಇವರ ಬಳಿ ಇವೆ.
ದೇಶ ವಿದೇಶಗಳ ನಾಣ್ಯಗಳೂ ಇಲ್ಲುಂಟು:ಭಾರತೀಯ ನಾಣ್ಯದ ಜೊತೆಗೆ ದೇಶ-ವಿದೇಶದ ನಾಣ್ಯಗಳೂ ಇವರ ಬಳಿ ಇವೆ. 5, 6ನೇ ಜಾರ್ಜ್ ಕಿಂಗ್ ಕಾಲದ ನಾಣ್ಯಗಳು, ವಿಕ್ಟೋರಿಯಾದ 1900ನೇ ಇಸವಿಯ ನಾಣ್ಯ, ಅಮೆರಿಕನ್ ಡಾಲರ್, ಜಪಾನ್, ಜರ್ಮನಿ, ನೈಜೀರಿಯಾ, ಸಿಂಗಾಪುರ್ ಹೀಗೆ ನೂರಾರು ದೇಶಗಳ ನಾಣ್ಯಗಳನ್ನು ಇವರು ಕಾಪಿಟ್ಟುಕೊಂಡಿದ್ದು ಎಲ್ಲರ ಗಮನ ಸೆಳೆಯುತ್ತಿದ್ದಾರೆ.