ಕಾರವಾರ: ಗಂಗಾವಳಿ ಪ್ರವಾಹಕ್ಕೆ ಅಂಕೋಲಾ ತಾಲೂಕಿನ ಗುಳ್ಳಾಪುರ-ಹಳವಳ್ಳಿ ಸೇತುವೆ ಕೊಚ್ಚಿ ಹೋಗಿದ್ದು, ಈ ಭಾಗದ ಹತ್ತಾರು ಗ್ರಾಮದ ಜನರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪ್ರವಾಹಕ್ಕೆ ಕೊಚ್ಚಿ ಹೋದ ಸೇತುವೆ ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಗಂಗಾವಳಿ ನದಿಯಲ್ಲಿ ಪ್ರವಾಹ ಎದುರಾಗಿದೆ. ಈ ರಣಭೀಕರ ಪ್ರವಾಹದಿಂದಾಗಿ ಅಂಕೋಲಾ ತಾಲೂಕಿನ ಗುಳ್ಳಾಪುರ-ಹಳವಳ್ಳಿ ಸೇತುವೆ ಕೊಚ್ಚಿ ಹೋಗಿದ್ದು, ಈ ಭಾಗದ ಹೆಗ್ಗಾರ್, ಕಲ್ಲೇಶ್ವರ, ಸೇವಕಾರ, ಕೊನಾಳ ಸೇರಿ ಹತ್ತಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ಇದನ್ನೂ ಓದಿ:ಕೊಡಗಿನಲ್ಲಿ ಮಳೆ ಆರ್ಭಟ: ಬೆಟ್ಟಗುಡ್ಡ ಕುಸಿತ, ರಸ್ತೆ ಬಿರುಕು ಉಂಟಾಗಿ ಸಂಚಾರ ಸ್ಥಗಿತ
ಸದ್ಯ ಸೇತುವೆ ಕೊಚ್ಚಿ ಹೋಗಿದ್ದರಿಂದ ನಡುಗಡ್ಡೆಯಂತಾಗಿದ್ದು, ಯಾವುದೇ ಸಂಚಾರ ಸಂಪರ್ಕವಿಲ್ಲದೇ ಸಾವಿರಾರು ಜನರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇನ್ನು 2019ರ ಪ್ರವಾಹದಲ್ಲಿ ಗ್ರಾಮಗಳ ಸಂಪರ್ಕಕ್ಕೆ ನಿರ್ಮಿಸಿದ್ದ 2 ತೂಗು ಸೇತುವೆಗಳು ಕೊಚ್ಚಿಹೋಗಿ ಸಂಕಷ್ಟ ಎದುರುಸುತ್ತಿದ್ದವರಿಗೆ ಇದೀಗ ಮತ್ತೆ ಮಹಾ ಕಂಟಕ ಎದುರಾಗಿದೆ. ಇದ್ದ ಒಂದು ಸಂಪರ್ಕ ಸೇತುವೆ ಕೂಡ ಕಡಿತವಾಗಿದ್ದು, ಹತ್ತಾರು ಗ್ರಾಮಗಳ ಜನರಿಗೆ ಮುಂದೇನು ಎಂಬ ಚಿಂತೆ ಕಾಡತೊಡಗಿದೆ.