ಕಾರವಾರ: ಯಲ್ಲಾಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸಚಿವ ಶಿವರಾಮ್ ಹೆಬ್ಬಾರ್ ಮಂಗಳವಾರ ಬೃಹತ್ ಮೆರವಣಿಗೆಯೊಂದಿಗೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ಸಲ್ಲಿಕೆ ಮಾಡಿರುವ ಘೋಷಣಾ ಪತ್ರದಲ್ಲಿ ತಮ್ಮ ಆಸ್ತಿ 21.16 ಕೋಟಿ ರೂ ಇರುವುದಾಗಿ ತಿಳಿಸಿದ್ದಾರೆ. ಹೆಬ್ಬಾರ್ ಹೆಸರಿನಲ್ಲಿ 14.60 ಲಕ್ಷ ಹಾಗೂ ಪತ್ನಿ ವನಜಾಕ್ಷಿ ಹೆಸರಿನಲ್ಲಿ 8.96 ಕೋಟಿ ಸೇರಿ ಒಟ್ಟು 9.10 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಹಾಗೂ ಹೆಬ್ಬಾರ್ ಬಳಿ 7.97 ಕೋಟಿ ಮತ್ತು ಪತ್ನಿ ಬಳಿ 4.19 ಕೋಟಿ ಸೇರಿ 12.16 ಕೋಟಿ ರೂ ಮೌಲ್ಯದ ಚರಾಸ್ತಿ ಹೊಂದಿರುವುದಾಗಿ ಘೊಷಣೆ ಮಾಡಿದ್ದಾರೆ. ಅಲ್ಲದೆ ತಮ್ಮ ಕೈಯಲ್ಲಿ 23 ಸಾವಿರ ರೂ ನಗದು, ವಿವಿಧ ಬ್ಯಾಂಕ್, ಆರ್ಥಿಕ ಸಂಸ್ಥೆಗಳಲ್ಲಿ 2.50 ಕೋಟಿ ರೂ ಠೇವಣಿ ಇರುವುದಾಗಿ ತಿಳಿಸಿದ್ದಾರೆ.
ಇನ್ನು ಮೂರು ಸ್ಕಾರ್ಪಿಯೊ, ಒಂದು ಇನ್ನೊವಾ ಕಾರು ಸೇರಿ ಒಟ್ಟು 5 ವಾಹನ, 2.95 ಕೆಜಿ ಆಭರಣ ಕುಟುಂಬದಲ್ಲಿದೆ. ವಿವಿಧ ಬ್ಯಾಂಕ್ ಹಾಗೂ ಸಂಸ್ಥೆಗಳಲ್ಲಿ ಒಟ್ಟು 2.31 ಕೋಟಿ ರೂ ಸಾಲವನ್ನು ಮಾಡಿರುವ ಅವರು ಪುತ್ರ ವಿವೇಕ ಹೆಬ್ಬಾರ್ ಅವರಿಗೆ ಒಟ್ಟು 2.14 ಕೋಟಿ, ಸೌಂಡ್ ಶೆಲ್ಟರ್ ಇಂಡಿಯಾ ಕಂಪನಿಗೆ 3.72 ಕೋಟಿ, ವಿನ್ಪ್ ಶುಗರ್ ಕಾರ್ಖಾನೆಗೆ 17.96 ಲಕ್ಷ ರೂ, ಶಿರಸಿ ಡೈರಿಗೆ 27.50 ಲಕ್ಷ ರೂ ಸಾಲವನ್ನು ಸಹ ನೀಡಿರುವ ಬಗ್ಗೆ ಘೋಷಣೆ ಮಾಡಿದ್ದಾರೆ.
ಇನ್ನು ಸಚಿವ ಶಿವರಾಮ್ ಹೆಬ್ಬಾರ್ ಮಂಗಳವಾರ ನಾಮಪತ್ರ ಸಲ್ಲಿಕೆಗೂ ಪೂರ್ವದಲ್ಲಿ ನಗರದಲ್ಲಿ ಬೃಹತ್ ಮೆರವಣಿಗೆ ಆಯೋಜಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ನಡೆಸಿದರು. ನಗರದ ಗ್ರಾಮದೇವಿ ದೇವಾಲಯದಿಂದ ಮೆರವಣಿಗೆ ಹೊರಟು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಳಿಕ ಯಲ್ಲಾಪುರ ಚುನಾವಣಾ ಕಚೇರಿಗೆ ತೆರಳಿ ತಮ್ಮ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿ ಶಿವರಾಮ್ ಹೆಬ್ಬಾರ್ ಇದು ನೀತಿ ಹಾಗೂ ಅಭಿವೃದ್ಧಿ ಆಧಾರಿತವಾಗಿ ನಡೆಯುವ ಚುನಾವಣೆ. ಯಾವುದೆ ಜಾತಿ ಆಧಾರದ ಮೇಲೆಯೂ ನಡೆಯುವುದಿಲ್ಲ. ರಾಜ್ಯದಲ್ಲಿ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಸರ್ಕಾರ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದೆ.
ಕೋವಿಡ್ ಸಮಯದಲ್ಲಿ ಮಾಡಿದ ಸಹಾಯ ಎಲ್ಲರಿಗೂ ನೆನಪಿದೆ. ಕಳೆದ ಬಾರಿ ಬೈ ಎಲೆಕ್ಷನ್ ಅಲ್ಲಿ 31 ಸಾವಿರ ಮತಗಳ ಅಂತರದಿಂದ ಆಯ್ಕೆ ಮಾಡಿದ್ದರು. ಈ ಬಾರಿ 50 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದೇನೆ ಎಂದರು. ಕಳೆದ ಬಾರಿಗೆ ಸುಲಭದ ಗೆಲುವು ಸಾಧ್ಯವಾಗಿತ್ತು. ಇದೀಗ ಐದನೇ ಬಾರಿಗೆ ಸ್ಪರ್ಧೆ ಭಯಸಿದ್ದು ಕ್ಷೇತ್ರದ ನರನಾಡಿಯೂ ನನಗೆ ಅರಿವಿದೆ. ಬಡವರ ಬಗ್ಗೆ ನನಗೆ ಅರಿವಿದೆ. ನಾನು ಚುನಾವಣೆಗಾಗಿ ದುಡ್ಡು ಹಾಳು ಮಾಡುವುದಿಲ್ಲ. ಗೆದ್ದ ದಿನದಿಂದಲೂ ಇದೇ ರಿತಿ ಜೋಶ್ನಲ್ಲಿ ರಾಜಕಾರಣ ಮಾಡುತ್ತಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ:ತುಮಕೂರು ನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ: ಸೊಗಡು ಶಿವಣ್ಣ ಘೋಷಣೆ