ಕರ್ನಾಟಕ

karnataka

By

Published : Apr 3, 2023, 7:01 PM IST

ETV Bharat / state

ಆಟೋ ಚಾಲಕನ ಮೇಲೆ ಹಲ್ಲೆ: ಶಾಸಕಿ ಪತಿ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲು

ಶಾಸಕಿ ವಿರುದ್ಧ ಖಾಸಗಿ ಸುದ್ದಿ ವಾಹಿನಿಗೆ ಹೇಳಿಕೆ ನೀಡಿರುವುದಕ್ಕೆ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆಟೋ ಚಾಲಕರು ಶಾಸಕಿ ಮತ್ತು ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ.

assault-on-auto-driver-in-karwar-case-registered-against-four-people
ಆಟೋ ಚಾಲಕನ ಮೇಲೆ ಹಲ್ಲೆ: ಶಾಸಕಿ ಪತಿ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲು

ಕಾರವಾರ (ಉತ್ತರ ಕನ್ನಡ) : ಶಾಸಕರ ವಿರುದ್ಧ ಖಾಸಗಿ ವಾಹಿನಿಗೆ ಸಂದರ್ಶನ ನೀಡಿರುವುದಕ್ಕೆ ತಮ್ಮ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಆಟೋ ಚಾಲಕ ಮಂಜು ಪೂಜಾರಿ ಎಂಬವರು ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಶನಿವಾರ ದೂರು ದಾಖಲಿಸಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಸುಭಾಸ್ ಸರ್ಕಲ್ ಬಳಿ ಖಾಸಗಿ ಸುದ್ದಿವಾಹಿನಿಯೊಂದು ಚುನಾವಣೆ ನಿಮಿತ್ತ ಜನಾಭಿಪ್ರಾಯ ಸಂಗ್ರಹಿಸುತ್ತಿದ್ದ ವೇಳೆ ಬಿಜೆಪಿ ಅಭಿಮಾನಿಯಾಗಿ ಶಾಸಕಿ ರೂಪಾಲಿ ನಾಯ್ಕ ಅವರಿಗೆ ಟಿಕೆಟ್ ನೀಡದಂತೆ ಹೇಳಿದ್ದೆ. ಈ ವಿಡಿಯೋ ಪ್ರಸಾರಗೊಂಡ ಬಳಿಕ ಶಾಸಕಿ ಪತಿ ಸಂತೋಷ ನಾಯ್ಕ, ಆಟೋ ಚಾಲಕರ ಸಂಘದ ಅಧ್ಯಕ್ಷ ದಿಲೀಪ್ ಅರ್ಗೇಕರ್, ರೋಶನ್ ಹರಿಕಂತ್ರ ಹಾಗೂ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಸ್ ಗುನಗಿ ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಕಾರವಾರ ಶಹರ ಪೊಲೀಸ್​​ ಠಾಣೆಯಲ್ಲಿ ಎಫ್​ಐಆರ್ ಕೂಡಾ​ ದಾಖಲಾಗಿದೆ.

ಶಾಸಕಿ ಪತಿ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲು

ಎಫ್​​ಐಆರ್​ ವಿವರ : ಸುಮಾರು 10-12 ದಿನಗಳ ಹಿಂದೆ ಸುಭಾಷ್​​ ಸರ್ಕಲ್​ ಬಳಿ ಇರುವ ರಿಕ್ಷಾ ಸ್ಟ್ಯಾಂಡ್​ನಲ್ಲಿ ಇರುವಾಗ ಖಾಸಗಿ ಸುದ್ದಿ ವಾಹಿನಿಯವರು ಚುನಾವಣೆ ಕುರಿತು ಸಂದರ್ಶನ ತೆಗೆದುಕೊಳ್ಳುತ್ತಿರುವಾಗ ನಾನು ಬಿಜೆಪಿ ಪಕ್ಷದ ಪರವಾಗಿ ಅಭಿಪ್ರಾಯ ನೀಡಿದ್ದೆ. ಬಿಜೆಪಿ ಪಕ್ಷದ ಅಭಿಮಾನಿಯಾದ ನಾನು ಎಲ್ಲಿ ನಮ್ಮ ಬಿಜೆಪಿ ಪಕ್ಷ ಸೋಲಬಹುದು ಎಂಬ ಭಯದಿಂದ ಖಾಸಗಿ ಸುದ್ದಿವಾಹಿನಿ ಮುಂದೆ ಈಗ ಇರುವ ಅಭ್ಯರ್ಥಿ ರೂಪಾಲಿ ನಾಯ್ಕ್​ರನ್ನು ಬದಲಿಸಬೇಕೆಂದು ಹೇಳಿದ್ದೆ. ಈ ಹೇಳಿಕೆಯು ಟಿವಿಯಲ್ಲಿ ಪ್ರಸಾರವಾದ ನಂತರ ನನ್ನ ಮೇಲೆ ಶಾಸಕಿ ರೂಪಾಲಿ ನಾಯ್ಕ್ ಅವರ ಪತಿ ಸಂತೋಷ್​ ನಾಯ್ಕ್​ ಅವಾಚ್ಯ ಪದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಆರೋಪಿತರಿಂದ ನನಗೆ ಜೀವಭಯವಿದ್ದು, ಸೂಕ್ತ ಕ್ರಮಕೈಗೊಂಡು ನನ್ನ ಮತ್ತು ನನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದು ದೂರುದಾರರು ತಮ್ಮ ದೂರಿನಲ್ಲಿ ಕೋರಿದ್ದಾರೆ.

ಇದನ್ನೂ ಓದಿ :ನೀತಿ ಸಂಹಿತೆ ಉಲ್ಲಂಘನೆ ಆರೋಪ: ಕೆಆರ್​ಪಿಪಿ ಸಂಸ್ಥಾಪಕ ಸೇರಿ ಐದು ಜನರ ಮೇಲೆ ಪ್ರಕರಣ ದಾಖಲು

ABOUT THE AUTHOR

...view details