ಕಾರವಾರ:ಟೋಲ್ ಗೇಟ್ ಬಳಿ ಗಲಾಟೆ ಮಾಡುತ್ತಿದ್ದವರನ್ನು ಪ್ರಶ್ನಿಸಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಮೇಲೆಯೇ ರಾಜಕೀಯ ಮುಖಂಡ ಹಾಗೂ ಮತ್ತವನ ತಂಡ ಹಲ್ಲೆ ಮಾಡಲು ಯತ್ನಿಸಿರುವ ಘಟನೆ ಅಂಕೋಲಾ ತಾಲೂಕಿನ ಹಟ್ಟಿಕೇರಿ ಟೋಲ್ ಗೇಟ್ ಬಳಿ ನಡೆದಿದೆ.
ಹಟ್ಟಿಕೇರಿ ಗ್ರಾಮದ ಬಳಿಯ ಐಆರ್‌ಬಿ ಟೋಲ್‌ನಲ್ಲಿ ನಿನ್ನೆ ಮಧ್ಯಾಹ್ನ ಗಲಾಟೆಯೊಂದು ನಡೆಯುತ್ತಿತ್ತು. ಟೋಲ್ ಗೇಟ್ ದಾಟುವಾಗ ಕಾರನ್ನು ತಡೆದರು ಎನ್ನುವ ಕಾರಣಕ್ಕೆ ಅಂಕೋಲಾದ ಕಾಂಗ್ರೆಸ್ ಮುಖಂಡ ಹಾಗೂ ಸಾಕ್ಷಿತ್ ಹಾರ್ಡವೇರ್ ಮಾಲೀಕ ಸುರೇಶ್ ನಾಯಕ ಅಲಗೇರಿ ಹಾಗೂ ಕಾರಿನಲ್ಲಿದ್ದವರು ಟೋಲ್ ಗೇಟ್‌ನಲ್ಲಿ ಗಲಾಟೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಎಎಸ್‌ಪಿ ಭದ್ರಿನಾಥ್ ಅವರು ಅದೇ ಮಾರ್ಗವಾಗಿ ಕುಮಟಾಕ್ಕೆ ತೆರಳುವಾಗ ಗಲಾಟೆಯಾಗುವುದನ್ನು ಕಂಡು ಸೈರನ್ ಹಾಕಿಕೊಂಡು ಗುಂಪು ಚದುರಿಸಿ ಹೋಗುವಂತೆ ತಿಳಿಸಿದ್ದಾರೆ. ಆದರೆ ಗುಂಪು ಚದುರಿ ಹೋಗದ ಹಿನ್ನೆಲೆ ತಾವೇ ಕೆಳಗೆ ಇಳಿದು ಯಾಕೆ ಗಲಾಟೆ ಮಾಡುವುದಾಗಿ ಪ್ರಶ್ನಿಸಲು ಮುಂದಾದಾಗ, ಕಾರಿನಲ್ಲಿದ್ದವರು ಎಎಸ್‌ಪಿ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ‘ನಮಗೆ ಕೇಳಲು ನೀವ್ಯಾರು?’ ಎಂದು ಎಎಸ್‌ಪಿಯವರನ್ನೇ ಪ್ರಶ್ನೆ ಮಾಡಿದ್ದಾರೆ.
ಎಎಸ್ಪಿ ಆರೋಪಿಗಳ ಕಾರನ್ನು ತಡೆಯಲು ಮುಂದಾದಾಗ ಚಾಲಕ ಕಾರನ್ನು ನಿಲ್ಲಿಸದೇ ಹೋಗಲು ಮುಂದಾಗಿದ್ದು, ಈ ವೇಳೆ ಕೆಳಕ್ಕೆ ಬಿದ್ದು, ಕೈಗೆ ಸಣ್ಣ ಗಾಯ ಕೂಡ ಆಗಿತ್ತು. ಈ ನಡುವೆ ತುರ್ತಾಗಿ ಕುಮಟಾಗೆ ತೆರಳಿದ ಎಎಸ್ಪಿ ಅಂಕೋಲಾ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದರು. ಇದೇ ವೇಳೆ ಟೋಲ್ ಸಿಬ್ಬಂದಿಯೊಬ್ಬ ಸಹ ಅಂಕೋಲಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.