ಕಾರವಾರ(ಉತ್ತರ ಕನ್ನಡ): ಪ್ರಸಕ್ತ ವರ್ಷ ಸುರಿದ ಭಾರೀ ಮಳೆಯಿಂದ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಕುಟುಂಬವೊಂದು ಬೀದಿ ಪಾಲಾಗಿದೆ. ಇದ್ದ ಒಂದು ಮನೆಯೂ ಮಳೆಯ ಆರ್ಭಟದಿಂದ ನೆಲಸಮವಾಗಿದೆ. ವಾಸಿಸೋಕೆ ಸೂರಿಲ್ಲದ ವಿಧವೆವೋರ್ವಳು ತವರು ಮನೆಯ ಸಹಾಯ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ.
ಮನೆ ಬಿದ್ದರೂ ದೊರಕದ ಪರಿಹಾರ: ವಿಧವೆಗೆ ಪರಿಹಾರ ಒದಗಿಸಲು ಗ್ರಾಮಸ್ಥರ ಆಗ್ರಹ! ಸಿದ್ದಾಪುರದ ವಾಜಗೋಡಿನ ಬಿಜ್ಜಾಳದಲ್ಲಿ ಕಳೆದ ಆಗಸ್ಟ್ ತಿಂಗಳ ಮೊದಲನೇ ವಾರದಲ್ಲಿ ಸುರಿದ ಭಾರೀ ಮಳೆಗೆ ಪರಿಶಿಷ್ಟ ಜಾತಿಗೆ ಸೇರಿದ ರಾಜೇಶ್ವರಿ ಎನ್ನುವವರಿಗೆ ಸೇರಿದ ವಾಸದ ಮನೆ ಕುಸಿದಿದೆ. ಅದೃಷ್ಟಕ್ಕೆ ಅಂದು ಮನೆಯಲ್ಲಿ ಯಾರೂ ಇರದಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ. ಮನೆ ಬೀಳುವ ಹಿಂದಿನ ದಿನ ಕುಟುಂಬದವರು ತವರು ಮನೆಗೆ ತೆರಳಿದ್ದರು. ಇವರದ್ದು 3 ಜನರ ಪುಟ್ಟ ಕುಟುಂಬವಾಗಿದ್ದು, ಮನೆಯ ಯಜಮಾನ ಮೃತಪಟ್ಟು ವರ್ಷ ಕಳೆದಿದೆ. ಮನೆಯಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳು ವಾಸಿಸುತ್ತಿದ್ದಾರೆ.
ಶಿಥಿಲಾವಸ್ಥೆಯಲ್ಲಿದ್ದ ಮನೆ ಬಿದ್ದು 2 ದಿನಗಳಾದ ಮೇಲೆ ಸ್ಥಳೀಯ ಆಧಿಕಾರಿಗಳು ಬಂದು ಮನೆಯನ್ನು ಪರಿಶೀಲಿಸಿ ಹೋಗಿದ್ದಾರೆ. ಈ ಹಿನ್ನೆಲೆ ಹೇಗಿದ್ದರೂ ಮೇಲಾಧಿಕಾರಿಗಳಿಗೆ ವರದಿ ತಲುಪಿರುತ್ತೆ. ಇದಕ್ಕೆ ಪರಿಹಾರ ಸಿಗುತ್ತೆ ಅಂತ ಅಂದುಕೊಂಡಿದ್ದ ಕುಟುಂಬಕ್ಕೆ ಈಗ ಆಘಾತ ಉಂಟಾಗಿದೆ. ಅಧಿಕಾರಿಗಳು, ಮನೆ ಸಂಪೂರ್ಣ ಕುಸಿದಿದ್ದು, ಮನೆಯಲ್ಲಿ ಯಾರೂ ವಾಸವಿಲ್ಲ ಅಂತ ವರದಿ ಸಲ್ಲಿಸಿದ್ದಾರೆ. ಮನೆಯಲ್ಲಿ ಇರೋ ವಸ್ತುಗಳು ಮಣ್ಣಿನ ಅಡಿಯಲ್ಲಿ ಹೂತು ಹೋಗಿವೆ. ಮಕ್ಕಳ ಶಾಲಾ ಪುಸ್ತಕಗಳೂ ಕೂಡ ಮನೆಯ ಅಡಿಯಲ್ಲಿ ಮಣ್ಣಾಗಿವೆ. ಮನೆ ಕರವನ್ನು ಕೂಡ ಕುಟುಂಬ ಸರಿಯಾಗಿ ತುಂಬುತ್ತ ಬಂದಿದೆ. ಈ ವಿಧವೆಯ ಕುಟುಂಬಕ್ಕೆ ಜಮೀನು ಕೂಡ ಇಲ್ಲ. ಈಗ ಈ ಕುಟುಂಬ ಬೀದಿಗೆ ಬಿದ್ದಿದೆ.
ಸಿದ್ದಾಪುರ ಕರ್ನಾಟಕ ವಿಧಾನಸಭಾಧ್ಯಕ್ಷರ ಕ್ಷೇತ್ರವಾಗಿದ್ದು, ಅಲ್ಲೇ ಈ ರೀತಿಯ ಘಟನೆ ನಡೆದಿರೋದು ದುರದೃಷ್ಟಕರ ಸಂಗತಿಯಾಗಿದೆ. ಇನ್ನಾದರೂ ಈ ಘಟನೆಯ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸಿ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.