ಉಡುಪಿ:ಮೀನು ಹಿಡಿಯಲು ತೆರಳಿದ್ದ ಬೋಟ್ನಿಂದ ಮೀನುಗಾರನೊಬ್ಬ ಆಯತಪ್ಪಿ ಅರಬ್ಬಿ ಸಮುದ್ರಕ್ಕೆ ಬಿದ್ದಿದ್ದ. ನಂತರ ಸುದೀರ್ಘ 43 ಗಂಟೆಗಳ ಕಾಲ ಈಜುತ್ತಲೇ ಬದುಕುಳಿದಿದ್ದ ಆತನನ್ನು ಗಂಗೊಳ್ಳಿ ಮೂಲದ ಮೀನುಗಾರರು ರಕ್ಷಣೆ ಮಾಡಿದ್ದಾರೆ.
ತಮಿಳುನಾಡಿನ 8 ಜನರ ತಂಡ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದರು. ತಂಡದಲ್ಲಿದ್ದ ಮುರುಗನ್ (25) ಎಂಬ ಮೀನುಗಾರ ಬುಧವಾರ ರಾತ್ರಿ ಮೂತ್ರ ವಿಸರ್ಜನೆಗೆ ಬೋಟ್‍ನ ಅಂಚಿಗೆ ಹೋಗಿದ್ದ ವೇಳೆ ಸಮುದ್ರಕ್ಕೆ ಬಿದ್ದಿದ್ದ. ಮುರುಗನ್ ಸಮುದ್ರದಲ್ಲಿ ಬಿದ್ದಿರುವುದು ಇತರೆ ಮೀನುಗಾರರಿಗೆ ತಿಳಿದಿರಲಿಲ್ಲ. ಬಳಿಕ ವಿಷಯ ತಿಳಿದು ಹುಡುಕಾಟ ನಡೆಸಿದರೂ ಪತ್ತೆ ಆಗಿರಲಿಲ್ಲ. ಕೊನೆಗೆ ತಮಿಳುನಾಡು ಮೀನುಗಾರರು ಮುರುಗನ್ ನೀರುಪಾಲಾಗಿ ಮೃತಪಟ್ಟಿದ್ದಾನೆ ಎಂದುಕೊಂಡಿದ್ದರು.
ನ.10ರಂದು ಶುಕ್ರವಾರ ಸಂಜೆ ಗಂಗೊಳ್ಳಿಯ ಸಾಗರ್ ಬೋಟಿನ ಮೀನುಗಾರರು ಆಳ ಸಮುದ್ರಕ್ಕೆ ತೆರಳಿದ್ದಾಗ, ಸಮುದ್ರದಲ್ಲಿ ಯಾರೋ ಈಜುವಂತೆ ಕಂಡುಬಂದಿದೆ. ಕೈಯನ್ನು ಎತ್ತಿ ರಕ್ಷಣೆಗೆ ಕೂಗಿಕೊಂಡಿದ್ದ ಯುವಕನನ್ನು ಕೂಡಲೇ ಎತ್ತಿ ಬೋಟಿಗೆ ಹಾಕಿದ್ದಾರೆ. ಬರೋಬ್ಬರಿ ಎರಡು ದಿನಗಳ ಕಾಲ ಸಮುದ್ರದಲ್ಲಿ ಈಜಾಡುತ್ತಲೇ ಬದುಕುಳಿದ ಮೀನುಗಾರ ಮುರುಗನ್ ಬಗ್ಗೆ ತಮಿಳುನಾಡು ಮೀನುಗಾರರಿಗೆ ತಿಳಿಸಲಾಗಿದೆ. ಆಗ ಅವರು ಅಚ್ಚರಿಗೆ ಒಳಗಾಗಿದ್ದಾರೆ.