ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್ನಲ್ಲಿ ತಳಮಳ ಉಂಟಾಗಿದೆ. ಒಂದೆಡೆ ಮೈತ್ರಿ ಒಪ್ಪಂದ ಮತ್ತೊಂದೆಡೆ ಪಕ್ಷನಿಷ್ಠರನ್ನು ದೂರು ಮಾಡಿಕೊಂಡ ಉಭಯಸಂಕಟಕ್ಕೆ ಕಾಂಗ್ರೆಸ್ ಒಳಗಾಗಿದೆ ಎಂಬ ಮಾತುಗಳು ಹರಿದಾಡುತ್ತಿವೆ.
ಹೌದು, ಮೈತ್ರಿ ಒಪ್ಪಂದದಂತೆ ಜೆಡಿಎಸ್ನಿಂದ ಸ್ಪರ್ಧಿಸುತ್ತಿರುವ ಪ್ರಮೋದ್ ಮಧ್ವರಾಜ್ರನ್ನು ಕಾಂಗ್ರೆಸ್ ಅನಿವಾರ್ಯವಾಗಿ ಬೆಂಬಲಿಸಬೇಕಿದೆ. ಆದರೆ ಪಕ್ಷದ ಹಿತ ಕಾಯಲೆಂದು ಶ್ರಮಿಸಿ, ಇದೀಗ ಅನಿವಾರ್ಯವಾಗಿ ಪಕ್ಷೇತರರಾಗಿ ಸ್ಪರ್ಧಿಸಿರುವ ಅಮೃತ ಶೆಣೈ ಅವರನ್ನು ಉಚ್ಛಾಟಿಸಿದ ಸಂಕಟವನ್ನೂ ಅನುಭವಿಸುತ್ತಿದೆ. ತಾನೇ ಮಾಡಿಕೊಂಡ ದ್ವಂದ್ವ ನೀತಿಗೆ ಇದೀಗ ಉಡುಪಿ ಜಿಲ್ಲಾ ಕಾಂಗ್ರೆಸ್ ಪರಿತಪಿಸುತ್ತಿದೆ.
ಒಲ್ಲದ ಮನಸ್ಸಿನಿಂದಲೆ ಕಾಂಗ್ರೆಸ್ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿಯ ಪರ ಪ್ರಚಾರಕ್ಕಿಳಿದಿದ್ದಾರೆ. ಜೆಡಿಎಸ್ ಸೇರುವ ಪ್ರಮೋದ್ ಮಧ್ವರಾಜ್ರ ಆತುರದ ನಿರ್ಧಾರ ಯಾವ ಕಾರ್ಯಕರ್ತನಿಗೂ ಸಮಾಧಾನ ತಂದಿಲ್ಲ. ಆದರೆ ಮೈತ್ರಿಧರ್ಮ ಪಾಲಿಸಲು ಈ ಆಯ್ಕೆಯನ್ನು ಒಪ್ಪದೆ ವಿಧಿಯಿಲ್ಲ ಎಂಬಂತಾಗಿದೆ. ಉಡುಪಿ ಜಿಲ್ಲೆಯಲ್ಲಿ ಕಚೇರಿಯೂ ಇಲ್ಲ ಜೆಡಿಎಸ್ ಈಗ ಸಂಪೂರ್ಣ ಕಾಂಗ್ರೆಸ್ ಕಟ್ಟಡಕ್ಕೆ ಶಿಫ್ಟ್ ಆಗಿದೆ.
ಉಭಯಸಂಕಟಕ್ಕೆ ಸಿಲುಕಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಭಾನುವಾರ ಉಡುಪಿಗೆ ಬಂದ ಸಿಎಂ ಕುಮಾರಸ್ವಾಮಿ ಕೂಡಾ ಕಾಂಗ್ರೆಸ್ ಕಚೇರಿಯಲ್ಲೆ ಸುದ್ದಿಗೋಷ್ಠಿ ನಡೆಸಿದರು. ಈ ನಡುವೆ ಕಾಂಗ್ರೆಸ್ ಹಿತ ಕಾಯಲು ಮುಂದಾದ ಎಐಸಿಸಿ ಸದಸ್ಯ ಅಮೃತ ಶೆಣೈ ಈಗ ಕಾಂಗ್ರೆಸ್ನಿಂದ ಹೊರದೂಡಲ್ಪಟ್ಟಿದ್ದಾರೆ. ಪಕ್ಷೇತರರಾಗಿ ಕಣಕ್ಕಿಳಿದಿರುವ ಶೆಣೈ, ಆರು ವರ್ಷಗಳ ಕಾಲ ಕಾಂಗ್ರೆಸ್ನಿಂದ ಉಚ್ಛಾಟಿತರಾಗಿದ್ದಾರೆ.
ಕಾಂಗ್ರೆಸ್ನ ಈ ದ್ವಿಮುಖ ನೀತಿಗೆ ಕಿಡಿಕಾರಿರುವ ಅಮೃತ ಶೆಣೈ ರಾಜ್ಯ ಸರ್ಕಾರದ ಟಿಪ್ಪು ಜಯಂತಿಯಲ್ಲಿ ಸಚಿವನಾಗಿ ಯಾವತ್ತೂ ಭಾಗವಹಿಸದ ಪ್ರಮೋದ್ ಮಧ್ವರಾಜ್ ವಿರುದ್ಧ ಏಕೆ ಶಿಸ್ತುಕ್ರಮ ಕೈಗೊಂಡಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಪ್ರಮೋದ್ ಮಧ್ವರಾಜ್ ತಾಳ್ಮೆಯಿಂದಿದ್ದರೆ ಬೆಂಗಳೂರು ಉತ್ತರದಂತೆ ಅಥವಾ ಉಡುಪಿ-ಚಿಕ್ಕಮಗಳೂರಿನಿಂದಲಾದರೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಅವಕಾಶವಿತ್ತು ಅನ್ನೋದು ಹಿರಿಯ ಕಾಂಗ್ರೆಸಿಗರ ಅಭಿಪ್ರಾಯ. ಚುನಾವಣೆಗೆ ದಿನಾಂಕ ನಿಗದಿಯಾಗುವ ಮುನ್ನ ‘ಸಹಭಾಳ್ವೆ’ ಹೆಸರಲ್ಲಿ ಇದೇ ಅಮೃತ್ ಶೆಣೈ, ಪ್ರಗತಿಪರರ ಬೃಹತ್ ಸಮಾವೇಶ ನಡೆಸಿದ್ದರು. ಕಾಂಗ್ರೆಸ್ ಗೆಲುವಿಗೆ ವೇದಿಕೆ ನಿರ್ಮಿಸುವುದು ಅವರ ಉದ್ದೇಶವಾಗಿತ್ತು. ಆದರೆ ಎಲ್ಲವೂ ನೀರಲ್ಲಿ ಮಾಡಿದ ಹೋಮದಂತಾಗಿದೆ. ಪಕ್ಷದ ಹಿತಕಾಯಲು ಹೋದ ಅಮೃತ್ ಗೆ ಕಾಂಗ್ರೆಸ್ ವಿಷವುಣಿಸಿ, ಪಕ್ಷದ್ರೋಹ ಮಾಡಿದ ಪ್ರಮೋದ್ ಮಧ್ವರಾಜ್ಗೆ ಮಣೆಹಾಕಿದೆ ಅನ್ನೋದು ಕಟ್ಟಾ ಕಾಂಗ್ರೆಸಿಗರ ಅಭಿಪ್ರಾಯ.
ಕಾಂಗ್ರೆಸ್ನಲ್ಲಿ ಎದ್ದಿರುವ ಬಿರುಗಾಳಿಯನ್ನೇ ಬಿಜೆಪಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ. ಜೆಡಿಎಸ್ ಪಕ್ಷವು ಕಾಂಗ್ರೆಸ್ನಿಂದ ಅಭ್ಯರ್ಥಿಯನ್ನು ಎರವಲು ಪಡೆದು ಚುನಾವಣೆಗೆ ನಿಲ್ಲಿಸಿದೆ. ಪ್ರಮೋದ್ಗೆ ತಾನು ಯಾವ ಪಕ್ಷ ಅನ್ನೋದೇ ಮರೆತು ಹೋಗಿದೆ ಎಂದು ಶೋಭಾ ಕರಂದ್ಲಾಜೆ ಕುಟುಕಿದ್ದಾರೆ
ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಪ್ರಮೋದ್ ಮಧ್ವರಾಜ್ ತಮ್ಮ ಹಳೆಯ ಸಾಧನೆಗಳ ಪಟ್ಟಿ ಹಿಡಿದು ಮತಯಾಚನೆಗೆ ಹೊರಟಿದ್ದಾರೆ. ಸಿಎಂ ಕುಮಾರಸ್ವಾಮಿ ಈಗಾಗಲೇ ಕ್ಷೇತ್ರದಲ್ಲಿ ಮೂರು ಸುತ್ತಿನ ಪ್ರಚಾರ ನಡೆಸಿದ್ದಾರೆ. ಈ ಎಲ್ಲಾ ಗೊಂದಲಗಳ ನಡುವೆ ಗೆಲವು-ಸೋಲಿನ ಲೆಕ್ಕಾಚಾರವೂ ಜೋರಾಗಿ ನಡೆಯುತ್ತಿದೆ.