ಉಡುಪಿ: ಇಲ್ಲಿನ ಮಸೀದಿಯ ಅದ್ಭುತ ಶಿಲ್ಪಕಲೆಯ ಸೌಂದರ್ಯ ಎಲ್ಲರ ಆಕರ್ಷಿಣಿಯ ಕೇಂದ್ರವಾಗಿದೆ. ಇಸ್ಲಾಂ ಧರ್ಮಿಯರ ಪ್ರಾರ್ಥನಾ ಮಂದಿರಗಳಲ್ಲೇ ಬಲು ಅಪರೂಪದ ಎಂಬ ಖ್ಯಾತಿಗೆ ಪಾತ್ರವಾಗಿದೆ.
ಪ್ರಾರ್ಥನಾ ಮಂದಿರಗಳು ಶಾಂತಿ ಸಮಾಧಾನ ನೀಡುವ ತಾಣಗಳು. ಅದರ ಒಳಭಾಗದ ವಿನ್ಯಾಸಗಳು ಭಕ್ತಿ ಸ್ಫುರಣೆಯ ಕೇಂದ್ರವಾಗಬೇಕು. ಅಂತಹ ಶಕ್ತಿ ಕಲೆಗಿದೆ. ಜಿಲ್ಲೆಯ ಕಾಪು ತಾಲೂಕಿನ ಮಜೂರು ಎಂಬಲ್ಲಿರುವ ಬದ್ರಿಯಾ ಜುಮ್ಮಾ ಮಸೀದಿ ಕಾಷ್ಠ ಶಿಲ್ಪದ ವೈಭವದಿಂದ ಕಂಗೊಳಿಸುತ್ತಿದೆ. ಅತಿ ಅಪರೂಪ ಎಂಬಂತೆ ಇಂಡೋ-ಅರೆಬಿಕ್ ಶೈಲಿಯನ್ನು ಬಳಸಿ ಆಕರ್ಷಣೀಯವಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ.
ಯುವ ಪ್ರತಿಭಾವಂತ ಶಿಲ್ಪಿ ಹರೀಶ್ ಆಚಾರ್ಯ ತಮ್ಮ 10 ಜನರ ಬಳಗದೊಂದಿಗೆ ಸುಮಾರು 10 ತಿಂಗಳು ಶ್ರಮ ವಹಿಸಿ ಈ ಸುಂದರ ಪ್ರಾರ್ಥನಾ ಮಂದಿರವನ್ನು ಅಣಿಗೊಳಿಸಿದ್ದಾರೆ. ಇದಕ್ಕಾಗಿ ಊರಿನಲ್ಲೇ ದೊರೆತ ಒಂದು ಸಾವಿರ ಸಿಎಫ್ಟಿ ಸಾಗುವಾನಿ ಮರಗಳನ್ನೇ ಬಳಸಲಾಗಿದೆ. ಮರಗಳ ಕೆತ್ತನೆಗಳಿಗೆ ಸರಿ ಹೊಂದುವಂತೆ ದುಬೈ ಮುಂತಾದೆಡೆಗಳಿಂದ ಆಕರ್ಷಕ ಲೈಟ್ ಗಳನ್ನು ತರಿಸಲಾಗಿದೆ. ಪ್ರಥಮ ಬಾರಿಗೆ ಮಿಂಬರ್ ಮೆಹರಬ್ ಗಳನ್ನು ಮರದಿಂದ ನಿರ್ಮಿಸಲಾಗಿದೆ. ಮೆಹರಬ್ನ ಒಂದು ಭಾಗದ ಹಿಡಿಯ ಒಳಭಾಗದಲ್ಲಿ ಸೂಕ್ಷ್ಮ ಕೆತ್ತನೆಯ ಮಸೀದಿ ಕೆತ್ತಲಾಗಿದೆ. ಸುಂದರ ಕಂಬಗಳು ಅಡ್ಡ ಪಟ್ಟಿಗಳು ಹಳೆಯ ದೇವಾಲಯಗಳ ಶಿಲಾ ಕೆತ್ತನೆಯನ್ನು ನೆನಪಿಸುತ್ತದೆ.