ಉಡುಪಿ: ಕರಾವಳಿಯಲ್ಲಿ ನಡೆಯುತ್ತಿರುವ ಅಕ್ರಮ ಜಾನುವಾರು ಸಾಗಾಟ ಪ್ರಕರಣದಲ್ಲಿ ಇದೀಗ ಇಬ್ಬರು ಪೊಲೀಸರನ್ನು ಬಂಧಿಸಿದ್ದು, ನಾಲ್ವರು ತಲೆಮರೆಸಿಕೊಂಡಿದ್ದಾರೆ.
ಅಕ್ರಮವಾಗಿ ಹಣ ಪಡೆದು ಜಾನುವಾರುಗಳ ಸಾಗಾಟಕ್ಕೆ ಅನುವು ಮಾಡಿಕೊಡುತ್ತಿದ್ದ ಪ್ರಕರಣದ ಹಿನ್ನೆಲೆಯಲ್ಲಿ ಮಲ್ಪೆಯ ಕರಾವಳಿ ಕಾವಲು ಪಡೆಯಲ್ಲಿ ಸಿಬ್ಬಂದಿಯಾದ ಸಂತೋಷ್ ಶೆಟ್ಟಿ ಹಾಗೂ ಮಂಕಿ ಪೊಲೀಸ್ ಠಾಣೆ ಸಿಬ್ಬಂದಿ ವಿನೋದ್ ಗೌಡ ಬಂಧಿತರಾಗಿದ್ದಾರೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ವಿವಿಧ ಠಾಣೆಯ ನಾಲ್ವರು ಪೊಲೀಸರ ಹೆಸರು ಕೇಳಿಬಂದಿದ್ದು, ಅವರು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
ಜಾನುವಾರು ಸಾಗಾಟದಲ್ಲಿ ಪೊಲೀಸರೇ ಭಾಗಿ: ಇರ್ವರ ಬಂಧನ ನಾಲ್ವರ ಹುಡುಕಾಟ ಸದ್ಯ ಬಂಧಿತ ಇಬ್ಬರು ಪೊಲೀಸರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹದಿನೈದು ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇನ್ನು ನಾಲ್ವರು ಪೊಲೀಸ್ ಸಿಬ್ಬಂದಿ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ.
ಆರೋಪಿಗಳಾದ ಕಾರಿನ ಚಾಲಕ ಶಿವಾನಂದ ಹಾಗೂ ಮಾರುತಿ ನಾರಾಯಣ ನಾಯ್ಕ, ಲಾರಿ ಚಾಲಕ ಸೈನುದ್ದೀನ್ ಹಾಗೂ ಲಾರಿಯಲ್ಲಿದ್ದ ಗಣೇಶನ್, ಹಮೀದ್ ಸಿ.ಹೆಚ್., ಸಮೀರ್ ಎನ್ನುವರನ್ನು ಬಂಧಿಸಲಾಗಿತ್ತು. 13 ಕೋಣ, 7 ಎಮ್ಮೆಗಳನ್ನು ಪೊಲೀಸರ ತಂಡ ರಕ್ಷಿಸಿತ್ತು. 12 ಲಕ್ಷ ಮೌಲ್ಯದ ಲಾರಿ, 2 ಲಕ್ಷ ಮೌಲ್ಯದ ಇಂಡಿಕಾ ಕಾರನ್ಮು ಕೂಡ ವಶಕ್ಕೆ ಪಡೆಯಲಾಗಿತ್ತು. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಪೊಲೀಸರು ಭಾಗಿಯಾಗಿರುವ ವಿಷಯ ಹೊರಬಿದ್ದಿದೆ.
ಇತ್ತ ಎಸ್ಪಿ ನಿಶಾ ಜೇಮ್ಸ್ ಅಕ್ರಮ ಜಾನುವಾರು ಕಳ್ಳತನ ಹಾಗೂ ಸಾಗಾಟ ತಡೆಗೆ ವಿವಿಧ ಕ್ರಮಗಳನ್ನು ಕೈಗೊಂಡಿದ್ದು, ಚೆಕ್ ಪೋಸ್ಟ್, ಗಸ್ತು ವ್ಯವಸ್ಥೆ, ಎಂ.ಒ.ಬಿ. ಪರೇಡ್ ಸೇರಿದಂತೆ ಇತರೆ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಆದರೆ, ಅವರದ್ದೇ ಇಲಾಖೆಯ ಕೆಲವು ಸಿಬ್ಬಂದಿ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿದ್ದು ಪ್ರಜ್ಞಾವಂತರನ್ನು ಬೆಚ್ಚಿಬೀಳಿಸಿದೆ.