ಉಡುಪಿ:ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಹಲವೆಡೆ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಉಡುಪಿಯ ನಿಟ್ಟೂರು, ಕೊಡಂಕೂರು, ಮಠದ ಬೆಟ್ಟು, ಗುಂಡಿಬೈಲು, ಬನ್ನಂಜೆ, ಬೈಲಕೆರೆ ಮೊದಲಾದ ಪ್ರದೇಶಗಳಲ್ಲಿ 600ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದ್ದು, ಜನರನ್ನು ರಕ್ಷಿಸುವ ಕಾರ್ಯ ಭರದಿಂದ ನಡೆಯುತ್ತಿದೆ.
ಉಡುಪಿ ಜಿಲ್ಲೆಯಲ್ಲಿ 600ಕ್ಕೂ ಅಧಿಕ ಮನೆಗಳು ಜಲಾವೃತ.. ಮಳೆ ಅವಾಂತರಕ್ಕೆ ನಲುಗಿದ ಜನ - more than 600houses in water
ನಿನ್ನೆ ರಾತ್ರಿಯಿಂದ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ತಗ್ಗುಪ್ರದೇಶಗಳಲ್ಲಿ 600ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿವೆ.
ನೀರಿನ ಮಟ್ಟ ಕ್ಷಣ-ಕ್ಷಣಕ್ಕೆ ಏರಿಕೆಯಾಗುತ್ತಿದ್ದು ಜನರಲ್ಲಿ ಗಾಬರಿ ಮೂಡಿಸಿದೆ. ಗ್ರಾಮೀಣ ಪ್ರದೇಶಗಳಾದ ಉದ್ಯಾವರ, ಕಾಪು, ಪಾಂಗಾಳ, ಮಣಿಪುರ, ಹಿರಿಯಡ್ಕ, ಬೈಂದೂರಿನ ನಾಡ, ಪೇರಂಪಳ್ಳಿ ಮೊದಲಾದ ಕಡೆಗಳಲ್ಲಿ ಕೃತಕ ನೆರೆ ಕಾಣಿಸಿಕೊಂಡಿದ್ದು ಕೃಷಿ ಭೂಮಿಗಳು ಸಂಪೂರ್ಣ ಮುಳುಗಡೆಗೊಂಡಿವೆ.
ಜಿಲ್ಲಾಡಳಿತ ಅಗತ್ಯ ಕ್ರಮವಾಗಿ ಅಲ್ಲಲ್ಲಿ ಗಂಜಿ ಕೇಂದ್ರಗಳನ್ನು ತೆರೆಯುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡವರನ್ನು ರಕ್ಷಿಸಲು ಅಗ್ನಿಶಾಮಕದಳದೊಂದಿಗೆ ಹಲವಾರು ಸ್ವಯಂಸೇವಕ ಸಂಘಟನೆಗಳು ಕೈಜೋಡಿಸಿವೆ. ಇನ್ನು ಮಲ್ಪೆಯಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಗೆ ತೆರಳಿದ ಮೂರು ಬೋಟುಗಳು ಮಳೆಯ ಆರ್ಭಟಕ್ಕೆ ಸಿಲುಕಿ ಕಡಲಾಳದಲ್ಲಿ ಸಿಕ್ಕಿಬಿದ್ದಿದ್ದು, ಇವರ ರಕ್ಷಣೆಗೆ ಮಂಗಳೂರಿಂದ ವಿಶೇಷ ಪಡೆಯನ್ನು ಕರೆಸಲಾಗುತ್ತಿದೆ.