ಉಡುಪಿ: ಸಾಮಾಜಿಕ ಜಾಲತಾಣದಲ್ಲಿ ಜಿಲ್ಲಾಡಳಿತ ಮತ್ತು ಕೋವಿಡ್ ಚಿಕಿತ್ಸೆಯ ಕುರಿತಾಗಿ ಊಹಾಪೋಹ ಹರಿಬಿಟ್ಟಲ್ಲಿ ಸೋಂಕು ನಿಯಂತ್ರಣ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಿಸಿ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಪೋಸ್ಟ್ ಮಾಡಿದರೆ ಕಠಿಣ ಕ್ರಮ: ಉಡುಪಿ ಡಿಸಿ
ಸಾಮಾಜಿಕ ಜಾಲತಾಣದಲ್ಲಿ ಏನು ಬೇಕಾದರೂ ಬರೆಯಬಹುದು ಎಂಬ ಭಾವನೆಯಲ್ಲಿ ಸುಳ್ಳು ಸುದ್ದಿಗಳನ್ನು ಪೋಸ್ಟ್ ಮಾಡಿದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.
ಉಡುಪಿ ಜಿಲ್ಲಾಡಳಿತ ಕೋವಿಡ್ ರೋಗಿಗಳ ಚಿಕಿತ್ಸೆಗೆ ಸುಮಾರು 3.5 ಲಕ್ಷ ಪಡೆಯುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವುದರ ವಿರುದ್ಧ ಗುಡುಗಿದ ಜಿಲ್ಲಾಧಿಕಾರಿಗಳು, ಡಾಕ್ಟರ್ ಟಿಎಂಎ ಪೈ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಎಲ್ಲಾ ಕೋವಿಡ್ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಗುಣಮುಖರಾದ ರೋಗಿಗಳಿಂದ ಯಾವುದೇ ಹಣವನ್ನು ಜಿಲ್ಲಾಡಳಿತ ಪಡೆದಿಲ್ಲ. ಕೆಲವರು ಸಾಮಾಜಿಕ ಜಾಲತಾಣದಲ್ಲಿ ಏನು ಬೇಕಾದರೂ ಬರೆಯಬಹುದು ಎಂಬ ಭಾವನೆಯಲ್ಲಿ ಇದ್ದಾರೆ. ಇದನ್ನು ಮುಂದುವರೆಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇದುವರೆಗೆ ಜಿಲ್ಲೆಯಲ್ಲಿ 947 ಜನರಿಗೆ ಪಾಸಿಟಿವ್ ಬಂದಿದೆ. ಇವರಿಂದ ಯಾವುದೇ ಹಣವನ್ನು ಪಡೆದಿಲ್ಲ. ಡಾಕ್ಟರ್ ಟಿಎಂಎ ಪೈ ಆಸ್ಪತ್ರೆಯಲ್ಲಿಯೂ ಕೂಡಾ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಇಂತಹ ಸಂಸ್ಥೆಗಳ ಹೆಸರನ್ನು ತೆಗೆಯುವ ಮುನ್ನ ಎಚ್ಚರಿಕೆ ವಹಿಸಬೇಕು ಎಂದು ಅವರು ಸೂಚನೆ ನೀಡಿದ್ದಾರೆ.