ಉಡುಪಿ: ಸರ್ಕಾರ ರಚನೆಯಾದ ದಿನದಿಂದ ಉಪಚುನಾವಣೆಗೆ ಕೆಲಸ ಶುರು ಮಾಡಿದ್ದೇವೆ. ಲೋಕಸಭಾ ಚುನಾವಣಾ ಫಲಿತಾಂಶದ ಮೂಲಕವೇ ಜನ ತೀರ್ಮಾನಿಸಿದ್ದು, ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಕನಸನ್ನ ಜನ ಕಂಡಿದ್ದಾರೆ. ಈ ಬಾರಿ ಉಪಚುನಾವಣೆಯಲ್ಲಿ ಬಿಜೆಪಿ 15 ಸ್ಥಾನಗಳಲ್ಲಿ ಗೆಲ್ಲುತ್ತದೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಭವಿಷ್ಯ ನುಡಿದಿದ್ದಾರೆ.
ಉಪ ಚುನಾವಣೆ ಕುರಿತು ಡಿ.ವಿ ಸದಾನಂದ ಗೌಡ ಭವಿಷ್ಯ ಶಾಸಕರ ಅನರ್ಹತೆ ವಿಚಾರವಾಗಿ ಮಾತನಾಡಿದ ಅವರು, ನಾಮಪತ್ರ ಸಲ್ಲಿಸಲು ಇನ್ನೂ ಹಲವು ದಿನ ಬಾಕಿ ಉಳಿದಿವೆ. ಸೋಮವಾರ ಸುಪ್ರೀಂಕೋರ್ಟ್ನಲ್ಲಿ ಈ ಬಗ್ಗೆ ವಿಚಾರಣೆ ನಡೆಯಲಿದೆ. ಒಂದೇ ದಿನದಲ್ಲಿ ಎಲ್ಲವೂ ಇತ್ಯರ್ಥವಾಗಬಹುದು. ಕಾನೂನಿನ ಚೌಕಟ್ಟಿನಲ್ಲಿ ಶಾಸಕರಿಗೆ ಸಮಸ್ಯೆಗಳು ಆಗಿದೆ. ಅನರ್ಹತೆ ಹೊಂದಿದವರೇ ಮತ್ತೆ ಸ್ಪರ್ಧೆ ಮಾಡುವ ಅವಕಾಶ ಸಿಗುತ್ತದೆ. ಅನರ್ಹರು ಮೊದಲು ಬಿಜೆಪಿ ಸೇರುತ್ತಾರೆ, ನಂತರ ಇವರ ಕುರಿತು ಪಕ್ಷ ತೀರ್ಮಾನ ತೆಗೆದುಕೊಳ್ಳುತ್ತದೆ. ಪಕ್ಷದ ತೀರ್ಮಾನಕ್ಕೆ ಬದ್ಧರಾಗಿದ್ದರೆ ಅವರು ಬಿಜೆಪಿಯಿಂದ ಕಣಕ್ಕಿಳಿಯಲಿದ್ದಾರೆ ಎಂದರು.
ಇಡಿ ವಶದಲ್ಲಿರುವ ಡಿಕೆಶಿ ವಿಚಾರವಾಗಿ ಮಾತನಾಡಿದ ಡಿವಿಎಸ್, ತನಿಖೆ ನಡೆಯುತ್ತಿರುವಾಗ ಈ ಬಗ್ಗೆ ನಾನು ಮಾತನಾಡಲ್ಲ. ತಪ್ಪು ಮಾಡಿದವರ ಮೇಲೆ ಕಾರ್ಯಾಚರಣೆ ನಡೆಯಲೇಬೇಕು. ನಾನು ತನಿಖಾ ಸಂಸ್ಥೆ ಅಲ್ಲ, ಬಿಜೆಪಿಯವರು ತಪ್ಪು ಮಾಡಿದ್ರೂ, ಅವರ ಮೇಲೂ ಕಾರ್ಯಾಚರಣೆ ನಡೆಯಲಿ. ಯಾರು ತಪ್ಪು ಮಾಡಿದ್ದಾರೆ ಅಂತ ತನಿಖಾ ಸಂಸ್ಥೆ ನಿರ್ಧರಿಸುತ್ತದೆ. ಆಡಳಿತ ಪಕ್ಷದ ಮೇಲೆ ಆರೋಪ ಮಾಡುವುದು ಸುಲಭ. ಆರೋಪ ಸಾಬೀತುಪಡಿಸುವುದು ಸವಾಲಿನ ಕೆಲಸ ಅಂತ ಡಿವಿಎಸ್ ಹೇಳಿದರು.
ಕಾಂಗ್ರೆಸ್ ಜೊತೆ ಉಪಚುನಾವಣಾ ಮೈತ್ರಿ ಇಲ್ಲ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಡಿವಿಎಸ್, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದೇ ಆಶ್ಚರ್ಯ. ಎರಡೂ ಪಕ್ಷದ ಸಜ್ಜನ ಶಾಸಕರು ಮೈತ್ರಿಯಿಂದ ನೊಂದು ಹೊರ ಬರಬೇಕಾಯ್ತು. ಸಿದ್ದರಾಮಯ್ಯಗೆ ಮತ್ತೆ ಸಿಎಂ ಆಗುವ ಆಸೆ ಇದೆ. ಅವರಿಗೆ ಯಾವುದಾದರೂ ಕುರ್ಚಿ ಬೇಕೇ ಬೇಕು. ಕುಮಾರಸ್ವಾಮಿಯನ್ನು ಇಳಿಸಿ ಕುರ್ಚಿ ಹಿಡಿದುಕೊಂಡರು ಎಂದರು.
ರಾಜ್ಯದ ನೆರೆ ಪರಿಹಾರ ವಿಚಾರವಾಗಿ ಮಾತನಾಡಿ, ಸದುಪಯೋಗ ಆಗುವಾಗ ಪರಿಹಾರ ಕೊಡುತ್ತೇವೆ. ಕೇಂದ್ರ ಎಸ್ ಡಿ ಆರ್ ಎಫ್ ನಿಂದ 380 ಕೋಟಿ ರೂ ಕೊಟ್ಟಿದೆ. ನೆರೆ ನಷ್ಟದ ವರದಿಗಳನ್ನು ಗೃಹ ಇಲಾಖೆ ಪಡೆದುಕೊಂಡಿದೆ. ತಾತ್ಕಾಲಿಕ ಪರಿಹಾರಕ್ಕೆ ರಾಜ್ಯದಲ್ಲಿ ದುಡ್ಡು ಇದೆ. ಕೇಂದ್ರದ ನೆರೆ ಪರಿಹಾರ ಬೇಡ, ರಾಜ್ಯದ ಬೊಕ್ಕಸದಲ್ಲಿ ಸಾಕಷ್ಟು ಹಣ ಇದೆ ಎಂದಿರುವ ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ಸದಾನಂದ ಗೌಡ ತಿರುಗೇಟು ನೀಡಿದರು.