ಉಡುಪಿ:ಕಲಾ ಪ್ರತಿಭೆ ಒಂದೆಡೆ ಸೇರುವುದೇ ಅಪರೂಪ. ಕಲಾ ರೂಪದ ವಿವಿಧ ಪ್ರದರ್ಶನಗಳ ಮುಲಕ ಕಲಾರಸಿಕರಿಗೆ ಮನರಂಜನೆಯ ರಸದೌತಣ ನೀಡಲು ಕರಾವಳಿಯ ಕಲಾ ಪ್ರತಿಭೆಗಳ ಅಪರಂಜಿ ಕಾರ್ಯಕ್ರಮವನ್ನು ನಗರದಲ್ಲಿ ಏರ್ಪಡಿಸಲಾಗಿತ್ತು.
ಉಡುಪಿಯಲ್ಲಿ 'ಅಪರಂಜಿ' ಕಾರ್ಯಕ್ರಮ...ಕಲಾ ಪ್ರತಿಭೆಗಳಿಂದ ರಸದೌತಣ
ನಗರದಲ್ಲಿಂದು ಕರಾವಳಿಯ ಪ್ರತಿಭೆಗಳಿಗಾಗಿ ಏರ್ಪಡಿಸಿದ್ದ ಅಪರಂಜಿ ಕಾರ್ಯಕ್ರಮದಲ್ಲಿ ವಿವಿಧ ಕಲಾರತ್ನಗಳು ಒಂದೇ ವೇದಿಕೆಯಲ್ಲಿ ರಂಗು ರಂಗಿನ ಪ್ರದರ್ಶನ ನೀಡಿದರು.
ಯೋಗದಲ್ಲಿ ಗಿನ್ನಿಸ್ ದಾಖಲೆ ಬರೆದ ಉಡುಪಿಯ ತನುಶ್ರೀ ಯೋಗ ಭಂಗಿಯ ಮೂಲಕ ಗಮನ ಸೆಳೆದರೆ, ಸ್ಪೀಡ್ ಪೇಂಟಿಂಗ್ನಲ್ಲಿ ವಿಶ್ವ ದಾಖಲೆ ಬರೆದ ವೀರ ಪ್ರದೀಶ್ ಮತ್ತು ರುಬಿಕ್ ಕ್ಯೂಬ್ನಲ್ಲಿ ಗಿನ್ನಿಸ್ ದಾಖಲೆ ಬರೆದ ಪ್ರಥ್ವೀಶ್ ಜೋಡಿ ಕಲಾ ರಸಿಕರನ್ನು ಮೋಡಿ ಮಾಡಿತು. ಯಕ್ಷಗಾನ ಪ್ರದರ್ಶನ ಮತ್ತು ದೀಪದ ನೃತ್ಯ ನೋಡುಗರ ಕಣ್ಮನ ಸೆಳೆಯಿತು.
ಕೆಜಿಎಫ್ ಚಿತ್ರದ ಜೋಕೆ ಹಾಡಿನ ಗಾಯಕಿ ಖ್ಯಾತಿಯ ಉಡುಪಿಯ ಐರಾ ಆಚಾರ್ಯ ಮತ್ತು ಸರಿಗಮಪ ಖ್ಯಾತಿಯ ವೈಷ್ಣವಿ ರವಿ ಮತ್ತು ರಜತ್ ಮಯ್ಯ, ಡಾ. ಅಭಿಷೇಕ್ ರಾವ್ ವಿವಿಧ ಹಾಡುಗಳ ಮೂಲಕ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ರು. ಇಂಡಿಯಾಸ್ ಗಾಟ್ ಟ್ಯಾಲೆಂಟ್ ಖ್ಯಾತಿಯ ಅಂಜಲಿ ಶ್ಯಾನುಭಾಗ್ ಸ್ಯಾಕ್ಸೋಫೋನ್ ಮೂಲಕ ನೆರೆದ ಪ್ರೇಕ್ಷಕರನ್ನು ರಂಜಿಸಿದರು.