ತುಮಕೂರು:ಎಮ್ಮೆ ತೊಳೆಯಲು ತೆರಳಿದ ಇಬ್ಬರು ಬಾಲಕರು ನೀರು ಪಾಲಾಗಿರುವ ಘಟನೆ ತಾಲೂಕಿನ ಅರೆಯೂರು ಸಮೀಪದ ದೇವರಹಟ್ಟಿ ಗ್ರಾಮದಲ್ಲಿ ಸೋಮವಾರ ನಡೆದಿದೆ. ಮನೋಜ್ (12) ಹಾಗೂ ಚಿರಂತ್ (14) ಮೃತರು. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಮೃತದೇಹಗಳನ್ನು ಹೊರತೆಗೆದು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ದಸರಾ ರಜೆ ಹಿನ್ನೆಲೆಯಲ್ಲಿ ಬಾಲಕರು ತಮ್ಮ ಅಜ್ಜಿ ಮನೆಗೆ ಬಂದಿದ್ದರು ಎಂದು ತಿಳಿದುಬಂದಿದೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಂಪತಿ ನೀರುಪಾಲು:ಇತ್ತೀಚಿಗೆ, ಬಟ್ಟೆ ಒಗೆಯುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದ ಪತ್ನಿಯನ್ನು ರಕ್ಷಿಸಲು ಹೋದ ಪತಿಯೂ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹರತಲೆ ಗ್ರಾಮದ ಬೀಚನಹಳ್ಳಿ ಬಲದಂಡೆ ನಾಲೆಯಲ್ಲಿ ನಡೆದಿತ್ತು. ತಾಲೂಕಿನ ಹುಸ್ಕೂರು ಗ್ರಾಮದ ಶಂಕರ ಮತ್ತು ಪತ್ನಿ ಬೇಬಿ ಮೃತರು. ಹುಸ್ಕೂರು ಗ್ರಾಮದಿಂದ ಹರತಲೆ ಬಳಿಯಿರುವ ಬೀಚನಹಳ್ಳಿ ಬಲದಂಡೆ ನಾಲೆಗೆ ಬಟ್ಟೆ ಒಗೆಯಲೆಂದು ಬೇಬಿ ಬಂದಿದ್ದರು. ನಂತರ ಪತ್ನಿಯನ್ನು ಕರೆದುಕೊಂಡು ಬರುವುದಾಗಿ ಶಂಕರ ನಾಲೆಯ ಬಳಿ ಬಂದಿದ್ದರು. ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಬೇಬಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವೇಳೆ ಪತ್ನಿಯನ್ನು ರಕ್ಷಿಸಲೆಂದು ಶಂಕರ ಸಹ ನಾಲೆಗಿಳಿದಿದ್ದರು. ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿ ಇಬ್ಬರೂ ಮೃತಪಟ್ಟಿದ್ದರು.