ತುಮಕೂರು: ಆ ವ್ಯಕ್ತಿ ಮೂರು ತಿಂಗಳ ಹಿಂದೆ ಮೃತಪಟ್ಟಿದ್ದ, ಬಳಿಕ ಶವಸಂಸ್ಕಾರ ತಿಥಿ ಕಾರ್ಯ ಎಲ್ಲವೂ ಮುಗಿದು ಕುಟುಂಬಸ್ಥರು ಬಹುತೇಕ ಆ ನೋವಿನಿಂದ ಹೊರಬಂದಿದ್ದರು. ಅಂದು ಮೃತಪಟ್ಟಿದ್ದಾನೆ ಎನ್ನಲಾದ ವ್ಯಕ್ತಿ ಈಗ ದಿಢೀರ್ ಪ್ರತ್ಯಕ್ಷವಾಗುವ ಮೂಲಕ ಕುಟುಂಬಸ್ಥರಿಗೆ ಮತ್ತು ಗ್ರಾಮಸ್ಥರಿಗೆ ಅಚ್ಚರಿ ಮೂಡಿಸಿರುವ ವಿಚಿತ್ರ ಘಟನೆ ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ನಡೆದಿದೆ.
ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಗ್ರಾಮದ ನಾಗರಾಜಪ್ಪ ಎಂಬಾತ ಮರಳಿ ಗ್ರಾಮದಲ್ಲಿ ಬಂದಿರುವ ವ್ಯಕ್ತಿ. ಈತನನ್ನು ನೋಡಿ ಕುಟುಂಬಸ್ಥರು, ಗ್ರಾಮಸ್ಥರು ಅಚ್ಚರಿ ಜೊತೆಗೆ ಗೊಂದಲಕ್ಕೆ ಒಳಗಾಗಿದ್ದಾರೆ. ಮಧುಗಿರಿ ತಾಲೂಕಿನ ಚಿಕ್ಕ ಮಾಲೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮಲತಾ ಅವರ ತಂದೆ ನಾಗರಾಜಪ್ಪ ಇಂದು ಬೆಳಗ್ಗೆ ಗ್ರಾಮಕ್ಕೆ ಬಸ್ನಲ್ಲಿ ಬಂದಿಳಿದು ಅಚ್ಚರಿ ಮೂಡಿಸಿದ್ದಾರೆ.
ಮೂರು ತಿಂಗಳ ಹಿಂದೆ ನಡೆದಿದ್ದೇನು..?
ಮದ್ಯಪಾನದ ಚಟಕ್ಕೆ ದಾಸನಾಗಿದ್ದ ನಾಗರಾಜಪ್ಪನನ್ನು ಅನಾರೋಗ್ಯದ ಹಿನ್ನೆಲೆ ಮೂರು ತಿಂಗಳ ಹಿಂದೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಖಾಸಗಿ ಆಸ್ಪತ್ರೆ ಸಿಬ್ಬಂದಿ ನಾಗರಾಜಪ್ಪ ಮೃತಪಟ್ಟಿದ್ದಾರೆ ಎಂದು ಶವವನ್ನು ಅವರ ಕುಟುಂಬದವರಿಗೆ ಹಸ್ತಾಂತರಿಸಿದ್ದರು.
ಕುಟುಂಬಸ್ಥರು ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದರು. ಆದರೆ ಇದೀಗ ನಾಗರಾಜಪ್ಪ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿದ್ದು, ಕುಟುಂಬದವರು ಗೊಂದಲಕ್ಕೀಡಾಗಿದ್ದಾರೆ. ಹಾಗಾದರೆ ಮೂರು ತಿಂಗಳ ಹಿಂದೆ ನೆರವೇರಿಸಿದ್ದ ಶವ ಯಾರದ್ದು..? ಎಂಬಿತ್ಯಾದಿ ಪ್ರಶ್ನೆಗೆ ಉತ್ತರ ಹುಡುಕಲು ಕೊಡಿಗೇನಹಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಇದನ್ನೂ ಓದಿ:ಬೆಂಗಳೂರಲ್ಲಿ ಕಾಲೇಜಿನ 2ನೇ ಮಹಡಿಯಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ: ಸಿಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ