ತುಮಕೂರು:ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಜನ್ಮದಿನೋತ್ಸವದ ಕಾರ್ಯಕ್ರಮವನ್ನು ಶಾಸಕ ಜಿ.ಬಿ ಜ್ಯೋತಿಗಣೇಶ್ ಉದ್ಘಾಟಿಸಿದರು.
ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವ ಅಂಗವಾಗಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್
ತುಮಕೂರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಜಿ.ಬಿ ಜ್ಯೋತಿಗಣೇಶ್ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ ಟಾಪ್ ವಿತರಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರ ನೆನಪಿನಾರ್ಥವಾಗಿ ಜನವರಿ ತಿಂಗಳಿನಾದ್ಯಂತ ಯುವಜನತೆಯ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಕೇವಲ ಆಚರಿಸುವುದಷ್ಟೇ ಅಲ್ಲದೇ ವಿವೇಕಾನಂದರ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿವೇಕಾನಂದರು ಭಾರತದ ಹಿರಿಮೆಯನ್ನು ಇಡೀ ವಿಶ್ವಕ್ಕೆ ಪರಿಚಯಿಸಿದವರು, ಅದೇ ರೀತಿ ಪ್ರತಿಯೊಬ್ಬರೂ ಸಹ ಭಾರತದ ಹಿರಿಮೆಯನ್ನು ಹೆಚ್ಚಿಸಬೇಕು ಎಂದರು.
ಇಡೀ ವಿಶ್ವದಲ್ಲಿ ಭಾರತ ಯುವಕರ ದೇಶವಾಗಿ ಬೆಳೆದಿದೆ, ಯುವ ಸಮೂಹ ಉತ್ತಮ ದಾರಿಯಲ್ಲಿ ನಡೆಯುವ ಮೂಲಕ ಶಿಕ್ಷಣವನ್ನು ಪಡೆದು, ಸಂಸ್ಕಾರಯುತವಾಗಿ ಬೆಳೆದು, ದೇಶದ ಅಭಿವೃದ್ಧಿಗೆ ಶ್ರಮಿಸಬೇಕಿದೆ. ಇಲ್ಲವಾದರೆ ಈ ಯುವಸಮೂಹ ಭಾರತ ದೇಶಕ್ಕೆ ದೊಡ್ಡ ಗಂಡಾಂತರವನ್ನು ತಂದೊಡ್ಡಲಿದೆ ಎಂದರು. ಇದೇ ವೇಳೆ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ ಟಾಪ್ ವಿತರಣೆ ಮಾಡಲಾಯಿತು.