ತುಮಕೂರು : ಜೆಡಿಎಸ್ ಶಾಸಕ ಸತ್ಯನಾರಾಯಣ ಅವರ ನಿಧನದಿಂದ ತೆರವಾದ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ನ. 3ರಂದು ಉಪ ಚುನಾವಣೆ ನಡೆಯಲಿದೆ. ನ.10ರಂದು ಫಲಿತಾಂಶ ಹೊರ ಬೀಳಲಿದೆ. ಶಿರಾ ವಿಧಾನಸಭಾ ಕ್ಷೇತ್ರ ಗೆಲ್ಲಲು (ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ) ಮೂರು ಪಕ್ಷಗಳು ಶತಾಯಗತಾಯ ರಣತಂತ್ರ ರೂಪಿಸುತ್ತಿವೆ. ಈ ಮೂಲಕ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ರಂಗೇರುತ್ತಿದೆ.
ಜೆಡಿಎಸ್ ತನ್ನ ಕ್ಷೇತ್ರ ಉಳಿಸಿಕೊಳ್ಳಲು ಸತ್ಯನಾರಾಯಣ ಅವರ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಲು ಭಾರಿ ಲೆಕ್ಕಾಚಾರ ಹಾಕುತ್ತಿದೆ. ಈಗಾಗಲೇ ಕಾಂಗ್ರೆಸ್ ಪಕ್ಷದ ವತಿಯಿಂದ ಮಾಜಿ ಸಚಿವ ಟಿಬಿ ಜಯಚಂದ್ರ ಅವರನ್ನೇ ಕಣಕ್ಕಿಳಿಸಲು ಕೆಪಿಸಿಸಿ ನಿರ್ಧರಿಸಿದೆ. ಬಿಜೆಪಿ ಚುನಾವಣೆ ಘೋಷಣೆಗೂ ಮುನ್ನವೇ ಶಿರಾ ಕ್ಷೇತ್ರದಲ್ಲಿ ನಿರಂತರ ಸಂಘಟನೆಯಲ್ಲಿ ತೊಡಗಿದೆ. ಆದರೆ, ಅಭ್ಯರ್ಥಿ ಮಾತ್ರ ಘೋಷಣೆ ಮಾಡಿಲ್ಲ. ಕಾದು ನೋಡುವ ತಂತ್ರ ಅನುಸರಿಸುತ್ತಿದೆ.
2018ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬಿ ಸತ್ಯನಾರಾಯಣ 74,338 ಮತಗಳಿಂದ ಜಯ ಗಳಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಟಿಬಿ ಜಯಚಂದ್ರ 63,973 ಮತಗಳನ್ನು ಪಡೆದು ಪರಾಭವಗೊಂಡಿದ್ದರು. ಬಿಜೆಪಿಯಿಂದ ಕಣಕ್ಕಿಳಿದಿದ್ದ ಎಸ್ ಆರ್ ಗೌಡ ಕೇವಲ 16,322 ಮತಗಳನ್ನು ಪಡೆದು 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಜನತಾ ಪರಿವಾರದಿಂದ ಸ್ಪರ್ಧಿಸಿದ್ದ ಬಿ ಸತ್ಯನಾರಾಯಣ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
ಮೂರು ಬಾರಿ ಸೋಲು ಕಂಡಿದ್ದರು. 1989ರಲ್ಲಿ ಜನತಾದಳದಿಂದ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಎಸ್ ಕೆ ದಾಸಪ್ಪ ಎದುರು ಸೋಲು ಕಂಡಿದ್ದರು. 2008 ಮತ್ತು 2013ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ ಬಿ ಜಯಚಂದ್ರ ಎದುರು ಸೋಲು ಕಂಡಿದ್ದರು. 2004,1994, 2018ರಲ್ಲಿ ಶಿರಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು.
ಪ್ರಸ್ತುತ ಕಾಂಗ್ರೆಸ್ ಅಭ್ಯರ್ಥಿ ಟಿ ಬಿ ಜಯಚಂದ್ರ ಸತತ 2008 ಮತ್ತು 2013ರಲ್ಲಿ ಶಾಸಕರಾಗಿದ್ದರು. 2018ರಲ್ಲಿ ಸತ್ಯನಾರಾಯಣ ಎದುರು 10,365 ಮತಗಳಿಂದ ಪರಾಭವಗೊಂಡಿದ್ದ ಟಿ ಬಿ ಜಯಚಂದ್ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಖಚಿತ. 2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್ ಆರ್ ಗೌಡ ಕೇವಲ 16,322 ಮತ ಪಡೆದಿದ್ದರು. ಕಳೆದ ಬಾರಿಯ 3 ಚುನಾವಣೆಯಲ್ಲಿಯೂ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆಯೇ ಪೈಪೋಟಿ ನಡೆಯುತ್ತಿತ್ತು.
ಆದರೆ, ಈ ಬಾರಿ ಬಿಜೆಪಿ ಸರ್ಕಾರ ರಾಜ್ಯದಲ್ಲಿರುವುದರಿಂದ ಬಿಜೆಪಿ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಚುನಾವಣೆಗೂ ಮುನ್ನವೇ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಕ್ಷೇತ್ರದಲ್ಲಿಯೇ ಮೊಕ್ಕಾಂ ಹೂಡಿದ್ದು ಬೂತ್ ಮಟ್ಟದ ಪ್ರಚಾರ ಸಭೆಯಲ್ಲಿ ಮಗ್ನರಾಗಿದ್ದಾರೆ. ಅಲ್ಲದೆ ಬಿ ವೈ ವಿಜಯೇಂದ್ರ ಕೂಡ ಒಂದು ಸುತ್ತು ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಕೂಡ ಪ್ರಬಲ ಪೈಪೋಟಿ ನೀಡಲಿದೆ ಎಂಬುದು ಸ್ಪಷ್ಟ. ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ನಿರ್ಣಾಯಕ ಎಂದೇ ಪರಿಗಣಿಸಲ್ಪಡುವ 30 ಸಾವಿರಕ್ಕೂ ಹೆಚ್ಚು ಕಾಡುಗೊಲ್ಲ ಸಮುದಾಯದ ಮತಗಳ ಮೇಲೆ ಬಿಜೆಪಿ ಕಣ್ಣಿರಿಸಿದೆ. ಹೀಗಾಗಿ, ಈ ಸಮುದಾಯದ ಮತ ಸೆಳೆಯಲು ಕಾಡು ಗೊಲ್ಲಸಮುದಾಯದ ಮುಖಂಡರಿಗೆ ಗಾಳ ಹಾಕಿದೆ. ಜೆಡಿಎಸ್ ಬೆಂಬಲಿತ ಕಾಡುಗೊಲ್ಲ ಸಮುದಾಯದ ಮತಗಳನ್ನು ಕೂಡ ಸೆಳೆಯಲು ಬಿಜೆಪಿ ರಣತಂತ್ರ ರೂಪಿಸಿದೆ.
ಹಿಂದೂಗಳ ಮೇಲೆ ಅಲ್ಪಸಂಖ್ಯಾತರ ದೌರ್ಜನ್ಯ ತಡೆಗಟ್ಟುವುದೇ ನಮ್ಮ ಗುರಿ ಎಂದು ಈಗಾಗಲೇ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಗೌಡ ಹೇಳಿಕೆ ನೀಡಿರುವುದು ಒಂದು ರೀತಿ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತಗಳನ್ನು ನೆಚ್ಚಿಕೊಂಡಿಲ್ಲ ಎಂಬುದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ. ಬಿಜೆಪಿಯ ಇಂತಹ ಹೇಳಿಕೆಗಳು ಕ್ಷೇತ್ರದಲ್ಲಿ ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿವೆ.
ಶಿರಾ ಉಪಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಸತ್ಯನಾರಾಯಣ ಅವರ ಅಕಾಲಿಕ ಮರಣದಿಂದ ಉಪಚುನಾವಣೆಯಲ್ಲಿ ಜೆಡಿಎಸ್ ಮತಗಳು ಚದುರಿ ಹೋಗುವ ಆತಂಕ ಕೂಡ ಒಂದೆಡೆ ಮನೆಮಾಡಿದೆ. ಹೀಗಾಗಿ, ಜೆಡಿಎಸ್ ಮತಗಳನ್ನು ಕ್ರೋಢೀಕರಿಸಲು ಜೆಡಿಎಸ್ ಮುಖಂಡರು ರಣತಂತ್ರ ರೂಪಿಸುತ್ತಿದ್ದಾರೆ. ಅಲ್ಲದೆ ಕುಟುಂಬದವರಿಗೆ ಟಿಕೆಟ್ ನೀಡುವ ಸಾಧ್ಯತೆಗಳು ತಳ್ಳಿ ಹಾಕುವಂತಿಲ್ಲ. ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಸಹ ಕ್ಷೇತ್ರದಲ್ಲಿ ಪ್ರಚಾರ ಮಾಡಲು ಮುಂದಾಗಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಟಿ ಬಿ ಜಯಚಂದ್ರ ಕೂಡ ಉಪಚುನಾವಣೆಯಲ್ಲಿ ಗೆಲುವು ಸಾಧಿಸಲು ತಮ್ಮ ಅಧಿಕಾರ ಅವಧಿಯಲ್ಲಿನ ನೀರಾವರಿ ಯೋಜನೆಗಳ ಅನುಷ್ಠಾನವನ್ನೇ ಪ್ರಮುಖ ಅಜೆಂಡಾವಾಗಿ ಬಳಸಿಕೊಂಡು ಪ್ರಚಾರದಲ್ಲಿ ತೊಡಗಿದ್ದಾರೆ. ಅಲ್ಲದೆ ಅಲ್ಪಸಂಖ್ಯಾತ ಸಮುದಾಯದ ಮತಗಳನ್ನು ಚದುರಿ ಹೋಗದಂತೆ ಮಾಡಲು ವ್ಯವಸ್ಥಿತ ಚುನಾವಣಾ ತಂತ್ರದಲ್ಲಿ ತೊಡಗಿದ್ದಾರೆ.
ಈಗಾಗಲೇ ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯಲು ಕಾಂಗ್ರೆಸ್ ಮುಖಂಡ ಕೆ ಎನ್ ರಾಜಣ್ಣ ಅವರೊಂದಿಗೂ ಕೂಡ ಇದ್ದ ಮುನಿಸಿಗೆ ಸಮಾಪ್ತಿ ಮಾಡಿದ್ದಾರೆ. ಈ ಮೂಲಕ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ನಡೆಯುವ ಸೂಚನೆಗಳು ಸ್ಪಷ್ಟವಾಗುತ್ತಿದೆ.