ತುಮಕೂರು: ಕೊರಟಗೆರೆ ವಿಧಾನಸಭಾ ಕ್ಷೇತ್ರದ ತೋವಿನಕೆರೆ ಗ್ರಾಮದಲ್ಲಿ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯು ದಿಢೀರ್ ಮಳೆಯಿಂದಾಗಿ ಸ್ಥಗಿತಗೊಂಡಿತು.
ಮಳೆಯಿಂದಾಗಿ ಡಿಸಿಎಂ ಜನಸಂಪರ್ಕ ಸಭೆ ರದ್ದು ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದ್ದ ಸಮಾರಂಭದ ಆರಂಭಕ್ಕೆ ಸರಿಯಾಗಿ ಮಳೆ ಕೂಡ ಆರಂಭವಾಯಿತು. ಇದರಿಂದಾಗಿ ಅಲ್ಲಿ ನೆರೆದಿದ್ದ ಬಹುತೇಕ ಜನರು ಮಳೆ ಪರಿಣಾಮ ಆಶ್ರಯ ಪಡೆಯಲು ಕುರ್ಚಿಗಳನ್ನು ತಲೆ ಮೇಲೆ ಹೊತ್ತುಕೊಂಡು ಅಲ್ಲಿಂದ ದೂರ ಸರಿದರು. ವೇದಿಕೆಯಲ್ಲಿದ್ದ ಪರಮೇಶ್ವರ್ ಜನಸಂಪರ್ಕ ಸಭೆಯನ್ನು ಮುಂದೂಡಿರುವುದಾಗಿ ಘೋಷಣೆ ಮಾಡಿದರು.
ತುಮಕೂರು ನಗರದಿಂದ ತೋವಿನಕೆರೆ ಗ್ರಾಮಕ್ಕೆ ಆಗಮಿಸುವ ಮಾರ್ಗ ಮಧ್ಯೆ ಉಪ ಮುಖ್ಯಮಂತ್ರಿ ಪರಮೇಶ್ವರ್ ಹಿರೇತೊಟ್ಲುಕೆರೆ ಗ್ರಾಮದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಗ್ರಾಮದಲ್ಲಿ ಸಾರ್ವಜನಿಕರಿಗೆ ನೀಡಲಾಗಿರುವ ಹಕ್ಕುಪತ್ರದ ಸಮಸ್ಯೆಯನ್ನು ಪರಿಹರಿಸುವಂತೆ ಜನರು ಮನವಿ ಮಾಡಿದರು.
ಅದೇ ರೀತಿ ಕೊರಟಗೆರೆ ತಾಲೂಕಿನ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ನು ಪರಮೇಶ್ವರ್ ವೀಕ್ಷಿಸಿದರು. ರಾಜೀವ್ ಗಾಂಧಿ ನಗರದಲ್ಲಿ ನಡೆಯುತ್ತಿರುವ ಕೆಲವು ಕಾಮಗಾರಿಗಳನ್ನು ಪರಿಶೀಲನೆ ಮಾಡಿದರು.