ತುಮಕೂರು : ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಆರ್ ಅಶೋಕ್ ಇಂದು ತುಮಕೂರು ಜಿಲ್ಲೆಯ ವಿವಿಧ ಭಾಗಗಳಲ್ಲಿ ಬೆಳೆ ನಷ್ಟದ ಕುರಿತು ಜಮೀನುಗಳಿಗೆ ತೆರಳಿ ಮಾಹಿತಿ ಸಂಗ್ರಹಿಸಿದರು. ಮೊಬೈಲ್ನಲ್ಲೇ ರೈತನ ಜಮೀನಿನ ಆರ್.ಟಿ.ಸಿ ಪರಿಶೀಲಿಸಿದ ಆರ್. ಅಶೋಕ್, ಬೆಳೆ ವಿವರ ದಾಖಲಿಸದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ವಿವರವಾಗಿ ಮಾಹಿತಿ ಸಂಗ್ರಹಿಸದ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಅವರು, ಅಧಿಕಾರಿಗಳು ರೈತನ ಜಮೀನಿಗೆ ಹೋಗದೆ ಬೆಳೆ ಸಮೀಕ್ಷೆ ಮಾಡಲಾಗಿದೆ. ಬೆಳೆ ಸಮೀಕ್ಷೆ ನಡೆಸಿರುವ ಬಗ್ಗೆ ಕನಿಷ್ಠ ಸಂಬಂಧಪಟ್ಟ ರೈತನಿಗೆ ಯಾವುದೇ ಮಾಹಿತಿ ನೀಡಿಲ್ಲ. ಅಲ್ಲದೆ ರೈತ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಕೂಡ ಮಾಡುವಂತಹ ಮಾಹಿತಿ ಲಭ್ಯವಾಗಿಲ್ಲ. ಇದು ಬೇಜವಾಬ್ದಾರಿಯಿಂದ ಕೂಡಿದ ಕೃಷಿ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವಾಗಿದೆ. ಸರಿಯಾದ ಮಾಹಿತಿ ನೀಡದ ಪರಿಣಾಮ ಎನ್ಡಿಆರ್ಎಫ್ ಪರಿಹಾರ ಸಿಗಲ್ಲ ಎಂದು ಹೇಳಿದರು.
ಚಾಮರಾಜನಗರ, ಬೀದರ್ನಲ್ಲಿ ಚೆಕ್ ಮಾಡಿದ್ದೆ. ಎಲ್ಲಾ ಕಡೆ ಒಂದೇ ರೀತಿ ಮಾಹಿತಿ ದಾಖಲಿಸುತ್ತಾರೆ. ನಾನು ರೆವಿನ್ಯೂ ಮಿನಿಸ್ಟರ್ ಇದ್ದೆ. ಒಂದೆರಡು ತಿಂಗಳಲ್ಲೇ ಪರಿಹಾರ ನೀಡಿದ್ವಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೇಂದ್ರ ಪರಿಹಾರ ಕೊಡಲಿ ಅಂತ ಕಾಯುತ್ತಿರಲಿಲ್ಲ. ರೈತರಿಗೆ ಅರಿವು ಮೂಡಿಸಬೇಕು. ಇದು ಇಂಪಾರ್ಟೆಂಟ್. ಆ್ಯಪ್ ಬಳಕೆ ಬಗ್ಗೆ ರೈತರಿಗೆ ತಿಳುವಳಿಕೆ ಇರಲ್ಲ ಎಂದರು. ಬೀದರ್ನಿಂದ ಇಲ್ಲಿಯವರೆಗೂ ಒಂದೇ ಲೈನ್ ಬರೆದರೆ ಹೇಗೆ?. ಈ ಬಗ್ಗೆ ಅಸೆಂಬ್ಲಿಯಲ್ಲಿ ಚರ್ಚೆ ಮಾಡ್ತೀನಿ ಎಂದು ತಿಳಿಸಿದರು.