ತುಮಕೂರು: ಕೊರೊನಾ ವೈರಸ್ನಿಂದಾಗಿ ಪ್ರತೀ ಕ್ಷೇತ್ರವೂ ಇಕ್ಕಟ್ಟಿಗೆ ಸಿಲುಕಿದೆ. ಮುಖ್ಯವಾಗಿ ಇದರಿಂದ ಶೈಕ್ಷಣಿಕ ಕ್ಷೇತ್ರವೂ ಹೊರತಾಗಿಲ್ಲ. ಮನೆಯಲ್ಲಿ ಉಳಿದಿರುವ ವಿದ್ಯಾರ್ಥಿಗಳು ಆನ್ಲೈನ್ ಕ್ಲಾಸ್ಗಳ ಮೊರೆ ಹೋಗುವಂತಾಗಿದೆ. ವಿದ್ಯಾರ್ಥಿಗಳು ಸ್ಮಾರ್ಟ್ ಫೋನ್, ಟ್ಯಾಬ್ಗಳು, ಲ್ಯಾಪ್ಟಾಪ್ಗಳ ಮೂಲಕ ಶಿಕ್ಷಣ ಪಡೆಯುವಂತಾಗಿದೆ. ಆದರೆ, ಇದರಿಂದಾಗಿ ತಮಗೆ ಗೊತ್ತಿಲ್ಲದೇ ವಿದ್ಯಾರ್ಥಿ ಸಮೂಹ ಸಮಸ್ಯೆಗೆ ಒಳಗಾಗುವಂತಾಗಿದೆ.
ಶಿಕ್ಷಣದ ಮೇಲೆ ಕೊರೊನಾ ದಾಳಿ: ಆನ್ಲೈನ್ ಶಿಕ್ಷಣದಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು...!
ವಿದ್ಯಾರ್ಥಿಗಳು ಸ್ಮಾರ್ಟ್ ಫೋನ್, ಟ್ಯಾಬ್ಗಳು, ಲ್ಯಾಪ್ಟಾಪ್ಗಳ ಮೂಲಕ ಶಿಕ್ಷಣ ಪಡೆಯುವಂತಾಗಿದೆ. ಆದರೆ ಇದರಿಂದಾಗಿ ವಿದ್ಯಾರ್ಥಿ ಸಮೂಹ ಸಮಸ್ಯೆಗೆ ಒಳಗಾಗುತ್ತದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ ಪ್ರಾಥಮಿಕ ಶಾಲಾ ಮಕ್ಕಳಿಗೆ ಆನ್ಲೈನ್ ತರಗತಿ ನಡೆಸಬಾರದು ಎಂದು ರಾಜ್ಯ ಸರ್ಕಾರ ಸೂಚನೆ ನೀಡಿದೆ. ಇನ್ನುಳಿದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿ ಮಾಡಬೇಕೋ ಬೇಡವೋ ಎಂಬ ಗೊಂದಲದಲ್ಲಿ ಸರ್ಕಾರವಿದೆ.
ಈ ಕುರಿತು ಶಿಕ್ಷಣ ತಜ್ಞರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪ್ರಾಥಮಿಕ ಶಾಲಾ ಮಕ್ಕಳಲ್ಲಿ ಸಾಮಾನ್ಯವಾಗಿ ತುಂಟಾಟವಿರುತ್ತದೆ. ಅವರಿಗೆ ಆನ್ಲೈನ್ ತರಗತಿಗಳನ್ನು ನಡೆಸಿದರೆ ಪ್ರಯೋಜನವಿಲ್ಲ. ಏಕೆಂದರೆ ಅವರು ಗಮನವಿಟ್ಟು ಕೇಳುವುದಿಲ್ಲ. ಅಷ್ಟೇ ಅಲ್ಲದೆ ವಿದ್ಯಾರ್ಥಿಯ ಮನಸ್ಸಿನ ಮೇಲೆ ಒತ್ತಡ ಹೇರಿದಂತಾಗುತ್ತದೆ. ಸಣ್ಣ ವಯಸ್ಸಿನಲ್ಲಿ ಆನ್ಲೈನ್ ತರಗತಿಗಳನ್ನು ಪರಿಚಯಿಸಿದರೆ ಸಾಮಾಜಿಕ ಜಾಲತಾಣಕ್ಕೆ ಮಕ್ಕಳು ಆಕರ್ಷಿತರಾಗುತ್ತಾರೆ. ಆನ್ಲೈನ್ ಶಿಕ್ಷಣ ನೀಡಿದರೆ ಸಾಮಾಜಿಕ ಚಟುವಟಿಕೆಯ ಅರಿವು ಇರುವುದಿಲ್ಲ. ಗುಂಪಿನಲ್ಲಿ ಕಲಿಯುವುದು, ಒಡನಾಟ, ಗೌರವ ಭಾವನೆ ಇವೆಲ್ಲವೂ ಇರುವುದಿಲ್ಲ. ಸಣ್ಣ ಮಕ್ಕಳು ಮತ್ತು ಶಿಕ್ಷಕರ ನಡುವಿನ ಸಂವಾದ ಸಮೀಪದಲ್ಲಿ ಇರಬೇಕು ಎಂದಿದ್ದಾರೆ.