ತುಮಕೂರು : ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ಆಗಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದಲ್ಲಿ ನಾಲ್ಕು ಏರ್ಪೋರ್ಟ್ಗಳಿಗೆ ಹೆಸರಿಡಲು ಸದನದಲ್ಲಿ ಅನುಮೋದನೆಯಾಗಿದೆ. ಅದು ಕೂಡ ಸದನಕ್ಕೆ ಬರಬೇಕು. ಅಂತಹ ಪ್ರಸ್ತಾಪ ಇದ್ದರೆ, ಅದನ್ನು ಸದನಕ್ಕೆ ತರುತ್ತೇವೆ ಎಂದು ಹೇಳಿದರು. ಇದನ್ನು ಸದನದಲ್ಲಿ ಮಸೂದೆಯ ರೂಪದಲ್ಲಿ ತರಬೇಕು. ಅಸೆಂಬ್ಲಿಯಲ್ಲಿ ಈ ಬಿಲ್ ಪಾಸಾಗಬೇಕು. ಅಲ್ಲಿ ಪರ ವಿರೋಧ ಮಾತನಾಡಬಹುದು ಎಂದು ಹೇಳಿದರು.
ಜಾತಿಗಣತಿ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದು ಒಳ್ಳೆಯ ಬೆಳವಣಿಗೆ ಅಲ್ಲ. ಈ ಬಗ್ಗೆ ನಿನ್ನೆಯೂ ಪ್ರತಿಕ್ರಿಯೆ ನೀಡಿದ್ದೇನೆ. ಜಾತಿಗಣತಿ ವರದಿಯಲ್ಲಿ ಏನಿದೆ ಅಂತಾನೆ ಗೊತ್ತಿಲ್ಲವಲ್ಲ. ಯಾವ ಜಾತಿ ಎಷ್ಟಿದೆ, ಯಾವ ಜಾತಿಯವರು ಕಡಿಮೆ ಇದ್ದಾರೆ. ಅವರ ಅಂಕಿ - ಅಂಶಗಳನ್ನು ಯಾರಾದರೂ ಹೇಳಿದ್ದಾರಾ ಎಂದು ಕೇಳಿದರು. ನಾವು 170 ಕೋಟಿ ಖರ್ಚು ಮಾಡಿ ಒಂದು ಸಮೀಕ್ಷೆ ಮಾಡಿಸಿದ್ದೇವೆ. ಆ ಸಮೀಕ್ಷೆ ಹೊರಗಡೆ ಬರಬೇಕಲ್ಲ ಎಂದು ಹೇಳಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲ್ಲೆಲ್ಲಿ ಬ್ಲಾಕ್ ಸ್ಪಾಟ್ ಗಳಿವೆ ಎಂದು ಪತ್ತೆ ಮಾಡಿ ಕ್ರಮಕೈಗೊಳ್ಳಲಾಗುತ್ತದೆ. ಪೊಲೀಸ್ ಇಲಾಖೆಯಿಂದ ಮಾಡ್ಬೇಕಾ, ಇಲ್ಲ PWD ಇಲಾಖೆಯಿಂದ ಮಾಡ್ಬೇಕಾ. ಎಲ್ಲವನ್ನೂ ಚರ್ಚೆ ಮಾಡುತ್ತಿದ್ದೇವೆ. ಈಗಾಗಲೇ ತುಮಕೂರು ಎಸ್ ಪಿ ಅವರಿಗೂ ಸೂಚನೆ ಕೊಟ್ಟಿದ್ದೇನೆ. ನಮ್ಮ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಹಳಷ್ಟು ಅಪಘಾತಗಳು ನಡೆಯುತ್ತಿವೆ. ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲೂ ಸುಮಾರು ಜನ ಸಾವನ್ನಪ್ಪಿದ್ದಾರೆ. ಈ ಬಗ್ಗೆ ನಾವು ಆಂತರಿಕ ಭದ್ರತಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆವು. ಎಡಿಜಿಪಿ ಅವರೇ ಸ್ಥಳಕ್ಕೆ ಭೇಟಿ ನೀಡಿ ಅಪಘಾತ ತಡೆಯಲು ಏನ್ ಕ್ರಮ ಮಾಡ್ಬೇಕು ಅದನ್ನು ಮಾಡಿದ್ದಾರೆ. ಇದಾದ ಮೇಲೆ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಿದರು.