ತುಮಕೂರು:ಜನತಾ ದರ್ಶನ ಕಾರ್ಯಕ್ರಮವು ಸರ್ಕಾರದ ಕಾರ್ಯಕ್ರಮವಾಗಿದೆ. ಜನರ ಆಶೋತ್ತರಗಳಿಗೆ ಸರಿಯಾಗಿ ಆಡಳಿತ ಮಾಡಬೇಕು ಎಂದು ನಮ್ಮ ಪ್ರಣಾಳಿಕೆಯಲ್ಲಿ ತಿಳಿಸಿದ್ದು, ಅದರಂತೆ ನಾವು ನಡೆದುಕೊಳ್ಳುತ್ತಿದ್ದೇವೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದರು. ತುಮಕೂರಿನಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದ ವೇಳೆ ಮಾತನಾಡಿದ ಅವರು, ನಾವು ಜನ ಪರವಾದ ಆಡಳಿತ ಕೊಡುತ್ತೇವೆ ಎಂದು ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದೇವೆ ಎಂದರು.
ಸರ್ಕಾರಕ್ಕೆ ಈಗಾಗಲೇ ಮೂರು ತಿಂಗಳು ತುಂಬಿದೆ, ಅದೇ ರೀತಿ ನಮ್ಮ ಆಡಳಿತ ಚುರುಕಾಗಬೇಕು. ಹೆಚ್ಚಿನ ರೀತಿಯಲ್ಲಿ ಜನರಿಗೆ ಸ್ಪಂದನೆ ಮಾಡಬೇಕು ಎಂದು ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಹಿಂದೆ ಕೂಡಾ ನಮ್ಮ ಸರ್ಕಾರ ಇದನ್ನು ಮಾಡಿದೆ. ಈಗ ಮತ್ತೆ ಪ್ರಾರಂಭ ಮಾಡಿದ್ದೇವೆ. ಜನರ ಅರ್ಜಿಗಳ ಮೂಲಕ ಅವರ ಸಮಸ್ಯೆಗಳನ್ನು ತಿಳಿದುಕೊಂಡು ಜಿಲ್ಲಾಡಳಿತ ಉತ್ತರವನ್ನು ಕೊಡುತ್ತದೆ. ಮೊದಲನೇಯದಾಗಿ ಇವತ್ತು ನಾವು ಪ್ರಾರಂಭ ಮಾಡ್ತಿದ್ದೇವೆ. ಇಡೀ ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಆಯಾ ಜಿಲ್ಲೆಯ ಉಸ್ತುವಾರಿ ಸಚಿವರು ಪ್ರಾರಂಭ ಮಾಡ್ತಾರೆ. ಬೆಂಗಳೂರಿನಲ್ಲಿ 30ನೇ ತಾರೀಖು ಮಾನ್ಯ ಮುಖ್ಯಮಂತ್ರಿಗಳು ಜನತಾ ದರ್ಶನವನ್ನು ಹಮ್ಮಿಕೊಂಡಿದ್ದಾರೆ ಎಂದು ಹೇಳಿದರು.
ಲೋಕಸಭಾ ಚುನಾವಣೆಗೆ ಜಿಲ್ಲಾ ಉಸ್ತುವಾರಿಗಳ ನೇಮಕ ವಿಚಾರವಾಗಿ ಮಾತನಾಡಿ, ನಮ್ಮ ಪಕ್ಷದಿಂದ ಪ್ರತಿಯೊಬ್ಬ ಸಚಿವರು ಲೋಕಸಭಾ ಚುನಾವಣೆಗೆ ಉಸ್ತುವಾರಿ ವಹಿಸಿದ್ದಾರೆ. ನನಗೆ ಬೆಂಗಳೂರು ಉತ್ತರ ಕ್ಷೇತ್ರದ ಉಸ್ತುವಾರಿಯನ್ನಾಗಿ ಮಾಡಿದ್ದಾರೆ. ತುಮಕೂರು ಇರುತ್ತೆ ಅದರ ಜೊತೆಗೆ ಮತ್ತೊಂದು ಕ್ಷೇತ್ರದ ಉಸ್ತುವಾರಿ ಕೊಟ್ಟಿದ್ದಾರೆ ಎಂದರು.