ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕು ಸಮುದಾಯದಕ್ಕೆ ಹರಡುವ ಭೀತಿ ಎದುರಾಗಿದ್ದು, ನಮ್ಮ ಕೈತಪ್ಪುತ್ತಿದೆಯೇ ಎಂಬ ಆತಂಕವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಂಕು ಹರಡುವಿಕೆ ತಡೆಗಟ್ಟಲು ಸಾರ್ವಜನಿಕರ ಸಹಭಾಗಿತ್ವ ಅಗತ್ಯವಿದೆ ಎಂದರು. ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ 350 ಹೈಪೋ ಆಕ್ಸಿಜನ್ ಹೊಂದಿದ ಬೆಡ್ಗಳು ಲಭ್ಯವಾಗಲಿವೆ. ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ 50 ಬೆಡ್ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅಲ್ಲದೆ ಖಾಸಗಿ ಮೆಡಿಕಲ್ ಕಾಲೇಜುಗಳಿಂದ 500 ಬೆಡ್ಗಳು ಲಭ್ಯವಾಗಲಿವೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸೋಂಕಿನ ಗುಣಲಕ್ಷಣಗಳು ಕಂಡ ತಕ್ಷಣ ಸಾರ್ವಜನಿಕರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಬಂದು ಪರೀಕ್ಷಿಸಿಕೊಳ್ಳಬೇಕು. ರೋಗಿಯಲ್ಲಿ ಸೋಂಕಿನ ಪ್ರಮಾಣ ಮಿತಿಮೀರಿದ ನಂತರ ಆಸ್ಪತ್ರೆಗೆ ಕರೆದುಕೊಂಡು ಬಂದರೆ ಸಂಪೂರ್ಣ ಚಿಕಿತ್ಸೆಯ ಭರವಸೆ ಅಸಾಧ್ಯವಾಗಲಿದೆ ಎಂದರು. ಈಗಾಗಲೇ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ 8 ಮಂದಿ ಸೋಂಕಿತರು ಐಸಿಯು ಘಟಕದಲ್ಲಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ತಿಳಿಸಿದರು.
ಇನ್ನೊಂದೆಡೆ 8 ಮಂದಿ ಹತ್ತು ವರ್ಷದೊಳಗಿನ ಮಕ್ಕಳು ಕೂಡ ಸೋಂಕಿಗೆ ಒಳಗಾಗಿದ್ದು, ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೇ ರೀತಿಯ ಭೀತಿಗೆ ಒಳಗಾಗಬೇಕಿಲ್ಲ ಎಂದರು.
ಜನರು ಕ್ವಾರಂಟೈನ್ ವ್ಯವಸ್ಥೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಸಂಪರ್ಕಿತರನ್ನು ಪತ್ತೆ ಹಚ್ಚುವುದು ಕಷ್ಟದ ಕೆಲಸವಾಗುತ್ತದೆ. ಈಗಾಗಲೇ ಗ್ರಾಮೀಣ ಮಟ್ಟಕ್ಕೆ ಸೋಂಕು ಹರಡಿರುವುದು ಸ್ಪಷ್ಟವಾಗುತ್ತಿದೆ. ಕೆಲವರು ನೆಗೆಟಿವ್ ಕಂಡು ಬಂದ ತಕ್ಷಣ ಸಮುದಾಯದಲ್ಲಿ ಓಡಾಡುತ್ತಿದ್ದಾರೆ. ಅವರು ಸ್ವಲ್ಪ ದಿನದ ಮಟ್ಟಿಗೆ ಕ್ವಾರಂಟೈನ್ನಲ್ಲಿದ್ದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಎಂದರು.