ತುಮಕೂರು: ವೈದ್ಯರ ನಿರ್ಲಕ್ಷ್ಯದಿಂದಲೇ ರೋಗಿ ಸಾವನ್ನಪ್ಪಿದ್ದಾನೆಂದು ಆರೋಪಿಸಿ ಆತನ ಸಂಬಂಧಿಕರು ಖಾಸಗಿ ಆಸ್ಪತ್ರೆಗೆ ನುಗ್ಗಿ ಗಾಜುಗಳನ್ನು ಪುಡಿಗಟ್ಟಿರುವ ಘಟನೆ ತುಮಕೂರಿನಲ್ಲಿ ನಿನ್ನೆ ರಾತ್ರಿ ನಡೆದಿದೆ.
ನಗರದ ವಿನಾಯಕ ಆಸ್ಪತ್ರೆಗೆ ನಿನ್ನೆ ಸಂಜೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮೊಮ್ಮದ್ ಗೌಸ್ (50) ಎಂಬುವವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೊಟ್ಟೆಯಲ್ಲಿ ಸಣ್ಣ ಇನ್ಫೆಕ್ಷನ್ ಆಗಿದೆ ಶಸ್ತ್ರಚಿಕಿತ್ಸೆ ಬಳಿಕ ಗುಣಮುಖರಾಗುತ್ತಾರೆ ಎಂದು ವೈದ್ಯರು ತಿಳಿಸಿದ್ದರು.
ಹೊಟ್ಟೆ ನೋವೆಂದು ಆಸ್ಪತ್ರೆಗೆ ಬಂದ ರೋಗಿ ಸಾವು ಆದರೆ ರಾತ್ರಿ ಏಕಾಏಕಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗಿ ಎಂದು ವೈದ್ಯರು ಸೂಚಿಸಿದ್ದರಂತೆ. ಆದರೆ, ಸ್ವಲ್ಪ ಹೊತ್ತಿನಲ್ಲಿಯೇ ಮೊಹಮ್ಮದ್ ಗೌಸ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು. ಇದರಿಂದ ರೊಚ್ಚಿಗೆದ್ದ ಮೃತರ ಸಂಬಂಧಿಕರು ವೈದ್ಯರ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿ, ಆಸ್ಪತ್ರೆ ಎದುರು ದಾಂಧಲೆ ನಡೆಸಿದರು.
ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದರು. ತಿಲಕ್ ಪಾರ್ಕ್ ಪೊಲೀಸ್ ಠಾಣೆ ಇನ್ಸ್ಸ್ಪೆಕ್ಟರ್ ಪಾರ್ವತಮ್ಮ ಅವರು ದಾಂಧಲೆ ನಡೆಸುತ್ತಿದ್ದವರನ್ನು ತರಾಟೆಗೆ ತೆಗೆದುಕೊಂಡು, ಪರಿಸ್ಥಿತಿಯನ್ನು ಹತೋಟಿಗೆ ತಂದರು.