ತುಮಕೂರು: ಕೊರೊನಾ ಅನೇಕ ಕ್ಷೇತ್ರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಅದರಲ್ಲಿ ಅನಾಥಾಶ್ರಮಗಳು ಕೂಡ ಹೊರತಾಗಿಲ್ಲ.
ಸರ್ಕಾರದ ಆದೇಶದಂತೆ ಅನಾಥಾಶ್ರಮಗಳಲ್ಲಿ ಇದ್ದ ಮಕ್ಕಳನ್ನು ಅವರ ಪಾಲಕರ ಬಳಿ ಕಡ್ಡಾಯವಾಗಿ ಕಳಿಸಿಕೊಡಲಾಗಿದೆ. ಹೀಗಾಗಿ ಅನಾಥಾಶ್ರಮಗಳು ಒಂದು ರೀತಿ ಬಿಕೋ ಎನ್ನುತ್ತಿವೆ.
ಇನ್ನೊಂದೆಡೆ ದಾನಿಗಳು ಸಹ ಅನಾಥಾಶ್ರಮಗಳತ್ತ ತಿರುಗಿಯೂ ನೋಡಿಲ್ಲ. ಇನ್ನು ಆಶ್ರಮಗಳಲ್ಲಿ ಮಕ್ಕಳು ಇಲ್ಲದಿರುವುದರಿಂದ ದಾನಿಗಳ ಸಹಾಯವು ಕೂಡ ಅಗತ್ಯವಿಲ್ಲದಂತಾಗಿದೆ. ಜಿಲ್ಲೆಯಲ್ಲಿ ಖಾಸಗಿ ಸಂಸ್ಥೆಗಳು ಒಟ್ಟು 13 ಅನಾಥ ಮಕ್ಕಳ ಕುಟೀರಗಳನ್ನು ನಡೆಸುತ್ತಿವೆ. ಇನ್ನು ಲಾಕ್ಡೌನ್ ಸಂದರ್ಭದಲ್ಲಿ ಸರ್ಕಾರದ ಆದೇಶದಂತೆ ಬಹುತೇಕ ಎಲ್ಲಾ ಮಕ್ಕಳನ್ನು ಅವರ ಪೋಷಕರ ಬಳಿ ಕಳುಹಿಸಿಕೊಡಲಾಗಿದೆ. ಆದರೆ ಎಂಟು ಮಕ್ಕಳನ್ನು ಮಾತ್ರ ಅನಾಥ ಮಕ್ಕಳ ಕುಟೀರದಲ್ಲಿ ಇರಿಸಿಕೊಳ್ಳಲಾಗಿದೆ.
ಅನಾಥ ಮಕ್ಕಳ ಕುಟೀರಗಳ ಮೇಲೂ ಕೆಂಗಣ್ಣು ಬೀರಿದ ಕೊರೊನಾ ಸರ್ಕಾರದ ವತಿಯಿಂದ ನಡೆಸಲಾಗುತ್ತಿರುವ ಬಾಲಕರ ಬಾಲ ಮಂದಿರದಲ್ಲಿ ಎಂಟು ಮಕ್ಕಳು ಆಶ್ರಯ ಪಡೆದಿದ್ದರೆ, ಸರ್ಕಾರದ ಬಾಲಕಿಯರ ಬಾಲ ಮಂದಿರದಲ್ಲಿ 32 ಮಕ್ಕಳು ಆಶ್ರಯ ಪಡೆದಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ಲಾಕ್ಡೌನ್ಗೂ ಮುನ್ನ ಅನಾಥ ಮಕ್ಕಳ ಕುಟೀರದಲ್ಲಿ 325 ಮಕ್ಕಳು ಆಶ್ರಯ ಪಡೆದಿದ್ದರು. ಶಾಲೆಗಳು ಆರಂಭವಾದ್ರೆ ಮಕ್ಕಳು ಬರುತ್ತಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಟರಾಜ್ ತಿಳಿಸಿದ್ದಾರೆ.
ಸರ್ಕಾರದ ಆದೇಶದಂತೆ ಲಾಕ್ಡೌನ್ ಸಂದರ್ಭದಲ್ಲಿ ಮಕ್ಕಳನ್ನು ಅವರ ಪೋಷಕರ ಬಳಿ ಕಳುಹಿಸಲು ಅನಾಥ ಮಕ್ಕಳ ಕುಟೀರದ ನಿರ್ವಹಣೆಗಾರರು ಸಾಕಷ್ಟು ಹರಸಾಹಸವನ್ನೇ ಪಟ್ಟರು. ಏಕೆಂದರೆ ಮಕ್ಕಳನ್ನು ಕರೆದುಕೊಂಡು ಹೋಗಲು ಸಂಬಂಧಪಟ್ಟ ಪೋಷಕರು ಮುಂದಾಗುತ್ತಿರಲಿಲ್ಲ. ಸರ್ಕಾರದ ಆದೇಶವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕಾಗಿದ್ದು ಅನಿವಾರ್ಯವಾಗಿದೆ. ಹೀಗಾಗಿ ಕರೆದುಕೊಂಡು ಹೋಗಿ ಎಂದು ಪೋಷಕರಿಗೆ ಮನವರಿಕೆ ಮಾಡಿಕೊಡಲಾಯಿತು.
ತಂದೆ-ತಾಯಿ ಇಬ್ಬರೂ ಇಲ್ಲದಂತಹ 8 ಮಕ್ಕಳಿಗೆ ಜಿಲ್ಲೆಯ ವಿವಿಧ ಅನಾಥ ಮಕ್ಕಳ ಕುಟೀರಗಳಲ್ಲಿ ಆಶ್ರಯ ನೀಡಲಾಗಿದೆ. ಅವರನ್ನು ಬಹು ಜಾಗ್ರತೆಯಿಂದ ಕೊರೊನಾ ಸೋಂಕಿನ ಹರಡುವಿಕೆ ಭೀತಿ ಹಿನ್ನೆಲೆ ನೋಡಿಕೊಳ್ಳಲಾಗುತ್ತಿದೆ. ಇನ್ನೊಂದೆಡೆ ಯಾವುದೇ ರೀತಿಯ ದಾನಿಗಳ ಸಹಾಯವಿಲ್ಲದೆ ಅನಾಥ ಮಕ್ಕಳ ಕುಟೀರಗಳನ್ನು ನಿರ್ವಹಣೆ ಮಾಡಲಾಗುತ್ತಿದೆ ಎನ್ನುತ್ತಾರೆ ಬಾಪೂಜಿ ವಿದ್ಯಾ ಸಂಸ್ಥೆಯ ಸಿಬ್ಬಂದಿ ಬಸವಯ್ಯ.