ತುಮಕೂರು:ಜಿಲ್ಲೆಯ ತಿಪಟೂರು ತಾಲೂಕಿನ ದಸರೀಘಟ್ಟ ಗ್ರಾಮದಲ್ಲಿ ನವರಾತ್ರಿ ಉತ್ಸವದ ವಿಜಯದಶಮಿಯಂದು ಚೌಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಮುಳ್ಳುಗದ್ದುಗೆ ಮೇಲೆ ಹೊತ್ತು ಸಾಗಿದ್ದು ವಿಶೇಷವಾಗಿತ್ತು.
ಪ್ರತಿ ವರ್ಷದಂತೆ ಈ ಬಾರಿಯೂ ಚೌಡೇಶ್ವರಿ ದೇಗುಲದ ಎದುರು ಅಪಾರ ಪ್ರಮಾಣದ ಮುಳ್ಳಿನ ರಾಶಿ ಹಾಕಲಾಗಿತ್ತು. ಸುಮಾರು 8 ಅಡಿ ಎತ್ತರದವರೆಗೂ ಇದ್ದ ಮುಳ್ಳಿನ ರಾಶಿಯ ಮೇಲೆ ದೇವಿಯ ಉತ್ಸವ ಮೂರ್ತಿಯನ್ನು ದೇಗುಲದ ಸಿಬ್ಬಂದಿ ಹೊತ್ತು ಸಾಗಿದರು.
ನೆರೆದಿದ್ದ ನೂರಾರು ಭಕ್ತರ ಸಮ್ಮುಖದಲ್ಲಿ ಜಯಘೋಷಗಳು ಮುಗಿಲು ಮುಟ್ಟಿದ್ದವು. ಮುಳ್ಳು ಗದ್ದುಗೆ ಮೇಲೆ ದೇವಿಯ ಉತ್ಸವ ಮೂರ್ತಿ ಸಾಗುವುದನ್ನು ಕಣ್ಣು ತುಂಬಿಕೊಳ್ಳಲು ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು. ಕಳೆದ ಒಂಭತ್ತು ದಿನಗಳಿಂದ ದೇಗುಲದಲ್ಲಿ ವಿಶೇಷ ಪೂಜಾ ವಿಧಿ ವಿಧಾನಗಳು ಸಾಂಗವಾಗಿ ನಡೆದಿದ್ದವು.
ದಸರೀಘಟ್ಟದ ಚೌಡೇಶ್ವರಿ ದೇವಿಯ ಬಳಿ ಪ್ರಧಾನಿ ಮೋದಿ ಕೂಡ ಭವಿಷ್ಯ ಕೇಳಿದ್ದರು. ಅಲ್ಲದೆ ಪ್ರತಿ ನವರಾತ್ರಿ ಉತ್ಸವದಂದು ಪ್ರಧಾನಿ ಮೋದಿಗೆ ನಿಂಬೆಹಣ್ಣು ಮತ್ತು ಕುಂಕುಮವನ್ನು ದೇಗುಲದಿಂದ ಪ್ರಸಾದವಾಗಿ ಕಳುಹಿಸಿಕೊಡುವ ಸಂಪ್ರದಾಯ ಈ ದೇವಸ್ಥಾನದಲ್ಲಿದೆ.