ತುಮಕೂರು:ಸೆಕೆಂಡ್ ಹ್ಯಾಂಡ್ ವಸ್ತುಗಳ ಮಾರಾಟ ವೇದಿಕೆಯಾದಓಎಲ್ಎಕ್ಸ್ ತಾಣದಲ್ಲಿ ಸೈನಿಕರ ಹೆಸರು ಹೇಳಿಕೊಂಡು ತುಮಕೂರು ಜಿಲ್ಲೆಯಲ್ಲಿ 4,50,033 ರೂ. ವಂಚಿಸಿರುವ ಬಗ್ಗೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಬರೋಬ್ಬರಿ 12 ಪ್ರಕರಣಗಳು ದಾಖಲಾಗಿವೆ.
ಓಎಲ್ಎಕ್ಸ್ ಅಪ್ಲಿಕೇಶನ್ನಲ್ಲಿ ಸೈನಿಕ ವಸ್ತ್ರದಲ್ಲಿ ಫೋಟೊಗಳನ್ನು ಹಾಕಿ ಜನರನ್ನು ನಂಬಿಸಿ ಭಾರಿ ಮೋಸವೆಸಗಿದ್ದಾರೆ. ಮರ ಮಾರಾಟ ಮಾಡುವುದಾಗಿ ನಂಬಿಸಿ ವಿನಯ ಕುಮಾರ್ ಅವರಿಗೆ 19,996 ರೂಗಳನ್ನು ವಂಚಿಸಲಾಗಿದೆ.
ಬೈಕ್ ಮಾರಾಟ ಮಾಡುವುದಾಗಿ ಹೇಳಿ 41,199 ರೂ. ಗಳನ್ನು ತುಮಕೂರಿನ ಸಿರಾ ಗೇಟ್ನ ಸೈಯದ್ ಉವೇಜ್ ಅವರಿಂದ ಪೀಕಲಾಗಿದೆ. ಕಾರು ಮಾರಾಟ ಮಾಡುವುದಾಗಿ ಹೇಳಿ ಕ್ಯಾತ್ಸಂದ್ರದ ಆನಂದ್ ಎಂಬುವರಿಂದ 21,300 ರೂ. ಗಳನ್ನು ದೋಚಲಾಗಿದೆ.
ಜೈಪುರದ ಹರೀಶ್ ಎಂಬುವರಿಗೆ ಪ್ರಿಂಟರ್ ಕಳುಹಿಸುವುದಾಗಿ ಹೇಳಿ 7,000 ರೂಗಳನ್ನು ವಂಚಿಸಲಾಗಿದೆ. ಶ್ರೀ ದೇವಿ ಮೆಡಿಕಲ್ ಕಾಲೇಜಿನ ಮಹೇಂದ್ರ ಚೌದರಿ ಎಂಬುವರಿಗೆ ಬೈಕ್ ಮಾರಾಟ ಮಾಡುವುದಾಗಿ ಹೇಳಿ 54,500 ರೂಗಳನ್ನು ವಂಚಿಸಲಾಗಿದೆ.
ತುಮಕೂರಿನ ಜಯನಗರದ ನವೀನ್ ಎಂಬವರಿಂದ ಆಟೋ ಕಾರು ಮಾರಾಟ ಮಾಡುವುದಾಗಿ ನಂಬಿಸಿ 99,619 ರೂಗಳನ್ನು ದೋಚಲಾಗಿದೆ. ತುಮಕೂರು ನಗರದ ಪಿ.ಎಚ್ ಕಾಲೋನಿ ಮಹಮದ್ ಇಬ್ರಾಹಿಂ ಅವರಿಗೆ ಬೈಕ್ ಮಾರಾಟ ಮಾಡುವುದಾಗಿ ನಂಬಿಸಿ 34019 ರೂ ವಂಚಿಸಲಾಗಿದೆ. ತುಮಕೂರು ತಾಲೂಕು ಸ್ವಾದೇನಹಳ್ಳಿಯ ಚೆನ್ನೇಗೌಡ ಎಂಬುವರಿಗೆ ಬೈಕ್ ಮಾರಾಟ ಮಾಡುವುದಾಗಿ ನಂಬಿಸಿ 33,000 ವಂಚಿಸಲಾಗಿದೆ.
ತುಮಕೂರು ತಾಲ್ಲೂಕು ಹೆಗ್ಗೆರೆ ಗ್ರಾಮದ ಆರ್ ಪ್ರಜ್ವಲ್ ಎಂಬುವರಿಗೆ ಕ್ಯಾಮೆರಾ ಮಾರಾಟ ಮಾಡುವುದಾಗಿ ಹೇಳಿ 10,600 ವಂಚಿಸಲಾಗಿದೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಕೆಂಕೆರೆ ಗ್ರಾಮದ ಮಲ್ಲಿಕಾರ್ಜುನ ಎಂಬುವರಿಗೆ ಬೈಕ್ ಮಾರಾಟ ಮಾಡುವುದಾಗಿ ಹೇಳಿ 46,100 ರೂಗಳನ್ನು ವಂಚಿಸಲಾಗಿದೆ.
ತುಮಕೂರು ಜಿಲ್ಲೆ ಮಧುಗಿರಿಯ ಆರ್ಯನ್ ಎಂಬವರಿಗೆ ಲ್ಯಾಪ್ಟಾಪ್ ಮಾರಾಟ ಮಾಡುವುದಾಗಿ ಹೇಳಿ 30,000 ವಂಚಿಸಲಾಗಿದೆ. ಇದೊಂದು ರೀತಿಯ ಅಂತರ್ಜಾಲ ವಂಚಕರ ಜಾಲವಾಗಿದೆ. ಮಿಲಿಟರಿಯವರು ಎಂದು ಹೇಳಿ ಕ್ಯೂಆರ್ ಕೋಡ್ ಕಳುಹಿಸಿ ಅದನ್ನು ಸ್ಕ್ಯಾನ್ ಮಾಡಲು ಹೇಳಿ ಸ್ಕ್ಯಾನ್ ಮಾಡಿಸಿ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನ ರಾಜ್ಯದವರಾಗಿದ್ದು ಬೆಂಗಳೂರಿನಲ್ಲಿ ಇರುತ್ತೇವೆ ಎಂದು ನಂಬಿಸಿ ವಂಚನೆ ಮಾಡಿದ್ದಾರೆ.