ತುಮಕೂರು:ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಮೀಸಲಾತಿ ನೀಡುವುದು ಸರ್ಕಾರದ ವಿವೇಚನೆಗೆ ಬಿಟ್ಟದ್ದು ಎಂದು ಸುಪ್ರೀಂಕೋರ್ಟ್ ಈಗಾಗಲೇ ತಿಳಿಸಿದೆ. ಆದರೆ ಇದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ನ ತೀರ್ಪನ್ನು ಬಹುಜನ ಸಮಾಜ ಪಕ್ಷ ಖಂಡಿಸುತ್ತದೆ ಎಂದು ಬಹುಜನ ಸಮಾಜ ಪಾರ್ಟಿ ಜಿಲ್ಲಾಧ್ಯಕ್ಷ ಮಹಮ್ಮದ್ ಇಕ್ಬಾಲ್ ತಿಳಿಸಿದರು.
ಸುಪ್ರೀಂ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದ ಬಹುಜನ ಸಮಾಜ ಪಕ್ಷ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿರುವುದನ್ನು ಬಹುಜನ ಸಮಾಜ ಪಕ್ಷ ಖಂಡಿಸುವುದರ ಜೊತೆಗೆ ಈ ತೀರ್ಪನ್ನು ವಿರೋಧಿಸುತ್ತದೆ. ಈ ತೀರ್ಪನ್ನು ಬದಲಾಯಿಸದಿದ್ದರೆ, ಮುಂದಿನ ದಿನಗಳಲ್ಲಿ ರಸ್ತೆಗಿಳಿದು ಈ ತೀರ್ಪಿನ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದರು.
ಬಳಿಕ ಮಾತನಾಡಿದ ಬಹುಜನ ಸಮಾಜ ಪಾರ್ಟಿಯ ಪ್ರಧಾನ ಕಾರ್ಯದರ್ಶಿ ರಂಗಧಾಮಯ್ಯ, ಇಂದಿಗೂ ಸಹ ಹಲವಾರು ಜನರಿಗೆ ಶಿಕ್ಷಣ, ಆರೋಗ್ಯ, ಮೂಲಭೂತ ಸೌಲಭ್ಯಗಳಿಲ್ಲ. ಹಾಗಾಗಿ ಅಂದಿನ ಕಾಲದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಮೀಸಲಾತಿಯನ್ನು ನೀಡಿದರು. ಈ ಮೀಸಲಾತಿ ಕೇವಲ ಬಡತನ ನಿರ್ಮೂಲನೆ ಮಾಡಲು ಅಲ್ಲ. ಸಂವಿಧಾನದ ಆಶಯಕ್ಕೆ ಧಕ್ಕೆ ತರುವಂತಹ ತೀರ್ಪನ್ನು ಸುಪ್ರೀಂಕೋರ್ಟ್ ನೀಡಿದೆ ಎಂದರು.
ದೇಶದಲ್ಲಿ ಅಸಮಾನತೆ ಎಲ್ಲಿಯವರೆಗೂ ಇರುತ್ತದೆಯೋ ಅಲ್ಲಿಯವರೆಗೂ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಉದ್ಯೋಗದಲ್ಲಿ ಮೀಸಲಾತಿ ಇರಬೇಕು ಎಂದು ಅಂಬೇಡ್ಕರ್ ಅವರು ಅಂದಿನ ಕಾಲದಲ್ಲಿಯೇ ತಿಳಿಸಿದ್ದಾರೆ. ಆದರೆ ಅಂಬೇಡ್ಕರ್ ಅವರ ಮಾತನ್ನು ಕೆಲವರು ತಿರುಚುವ ಮೂಲಕ ಅಂಬೇಡ್ಕರ್ ಅವರು ಕೇವಲ ಹತ್ತು ವರ್ಷ ಮಾತ್ರ ಮೀಸಲಾತಿ ಸಾಕು ಎಂದು ಹೇಳಿದ್ದಾರೆ ಎಂದು ಹೇಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.