ತುಮಕೂರು:ಶಾಲಾ ಆವರಣದಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಜೇನು ದಾಳಿ ಮಾಡಿದ್ದು 16 ವಿದ್ಯಾರ್ಥಿಗಳು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಚಿಕ್ಕನಹಳ್ಳಿಯಲ್ಲಿ ನಡೆದಿದೆ. ಶಾಲೆಯ ಪಕ್ಕದಲ್ಲಿರುವ ತೋಟದಲ್ಲಿ ಗೂಡು ಕಟ್ಟಿದ್ದ ಜೇನು ನೊಣಗಳು, ಇಂದು ಬೆಳಗ್ಗೆ ಶಾಲೆ ಆರಂಭಕ್ಕೂ ಮೊದಲು ಆವರಣದಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ದಾಳಿ ಮಾಡಿವೆ.
ಈ ವೇಳೆ, 20ಕ್ಕೂ ಹೆಚ್ಚು ಮಕ್ಕಳ ಮೇಲೆ ಜೇನು ನೋಣಗಳು ಏಕಾಏಕಿ ದಾಳಿ ನಡೆಸಿದ ಪರಿಣಾಮ ಮಕ್ಕಳ ಬೆನ್ನು, ಕುತ್ತಿಗೆ, ಮುಖ, ತಲೆಗೆ ಗಾಯಗಳಾಗಿವೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಶಿರಾ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಶಿರಾ ತಹಶೀಲ್ದಾರ್ ದತ್ತಾತ್ರೇಯ, ಡಿವೈಎಸ್ಪಿ ಶೇಖರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು.
ಪ್ರತ್ಯೇಕ ಪ್ರಕರಣ, ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ: ದ್ವಿಚಕ್ರ ವಾಹನಕ್ಕೆ ಇನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬಾಲಕರು ಸ್ಥಳದಲ್ಲೇ ಸಾವನ್ನಪ್ಪಿರುವ ಧಾರುಣ ಘಟನೆ ತುಮಕೂರು ನಗರದಲ್ಲಿ ನಡೆದಿದೆ. ಪ್ರಥಮ್(15), ವಿಜಯ್(15) ಮೃತ ಬೈಕ್ ಸವಾರರಾಗಿದ್ದಾರೆ. ತುಮಕೂರು ನಗರದ ಶೆಟ್ಟಿಹಳ್ಳಿ ವೃತ್ತದ ಬಳಿ ನಡೆದ ಅಪಘಾತವಾಗಿದ್ದು, ಮೃತ ಬಾಲಕರು ಕೌತಮಾರನಹಳ್ಳಿ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ. ಈ ಸಂಬಂಧ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.